ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಗೆ ಐಪಿಎಲ್ ನ ಒಂದು ಪಂದ್ಯದಿಂದ ನಿಷೇಧ ವಿಧಿಸಲಾಗಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಅತ್ಯಂತ ಮಹತ್ವದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಮೇ 7ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಗೆ 1 ಪಂದ್ಯ ನಿಷೇಧ ಹಾಗೂ 30 ಲಕ್ಷ ರೂ. ದಂಡ ವಿಧಿಸಲಾಗಿದೆ.
ನಿಷೇಧದ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ನ ಅತ್ಯಂತ ಮಹತ್ವದ ಪಂದ್ಯದಲ್ಲಿ ರಿಷಭ್ ಪಂತ್ ಸೇವೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದುಕೊಳ್ಳಲಿದೆ. ಪ್ಲೇಆಫ್ ಗೆ ಅರ್ಹತೆ ಪಡೆಯಲು ಎರಡೂ ತಂಡಗಳಿಗೆ ಈ ಪಂದ್ಯದ ಗೆಲುವು ಅತ್ಯಂತ ಪ್ರಮುಖವಾಗಿದೆ.
ಭಾನುವಾರದ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್ ಗೆ ಪ್ರವೇಶಿಸುವ ಸಾಧ್ಯತೆ ಇದ್ದರೆ, ಸೋತರೆ ಪ್ಲೇಆಫ್ ರೇಸ್ ನಿಂದ ಹೊರಬೀಳಲಿದೆ.