2 ಗಂಟೆಯಲ್ಲಿ ಬರೂಚ್ ಜಿಲ್ಲೆಯಲ್ಲಿ ಸುಮಾರು 120 ಮಿ.ಮೀ.ನಷ್ಟು ಭಾರೀ ಮಳೆಯಾಗಿದ್ದರಿಂದ ಜನರು ತತ್ತರಿಸಿದ್ದು, ಗುಜರಾತ್ 10 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೈಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಗುಜರಾತ್ ನಲ್ಲಿ ಎರಡು ದಿನಗಳ ಬಿಡುವಿನ ನಂತರ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಸೋಮವಾರ ಸಂಜೆ 4ರಿಂದ 6 ಗಂಟೆಯವರೆಗೆ ಭಾರೀ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಗುಜರಾತ್ ಕಂಗಲಾಗಿತ್ತು. ಎರಡು ದಿನ ಮಳೆ ಬಿಡುವು ನೀಡಿದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಸೋಮವಾರ ಸುರಿದ ಮಳೆಯಿಂದ ಮತ್ತೆ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಸೋಮವಾರ ದಿನವೀಡಿ ಮಳೆ ಸುರಿದರೂ ಸಂಜೆ 4 ರಿಂದ 6 ಗಂಟೆಯಲ್ಲಿ ಸುರಿದ ಭಾರೀ ಮಳೆಯಿಂದ 10 ನದಿಗಳು ತುಂಬಿ ಹರಿಯುತ್ತಿದ್ದು, 132 ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಗುಜರಾತ್ ನ 200 ಅಚ್ಚುಕಟ್ಟು ಪ್ರದೇಶಗಳು ಶೇ.79ರಷ್ಟು ಪ್ರದೇಶಗಳ ಮೇಲೆ ಪರಿಣಾಮ ಬೀರಲಿವೆ. ವಡೋದರಾದಲ್ಲಿ ಈಗಾಗಲೇ 20 ಸಾವಿರ ನಾಗರಿಕರನ್ನು ಸ್ಥಳಾಂತರಿಸಲಾಗಿದೆ.6,330 ಮಂದಿಯನ್ನು ರಕ್ಷಿಸಲಾಗಿದೆ.
64,360 ಜನರ ಸ್ಥಳಾಂತರಕ್ಕೆ 1.76 ಕೋಟಿ ರೂ. ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 84 ಸಾವಿರ ಜನರನ್ನು ಸ್ಥಳಾಂತರಗೊಳಿಸಲಾಗಿದ್ದು, ಇದಕ್ಕಾಗಿ 84 ಲಕ್ಷ ರೂ.ವನ್ನು ಜಿಲ್ಲಾಡಳಿತಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.