ಹೊಸದಾಗಿ ಮತ್ತೆ ಹಿಂಸಾಚಾರ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ 10,000 ಸೈನಿಕರನ್ನು ಮಣಿಪುರಕ್ಕೆ ರವಾನಿಸಲಿದೆ.
ನೆರೆಯ ಮಯನ್ಮಾರ್ ನಿಂದ ಅಕ್ರಮವಾಗಿ ವಲಸಿಗರು ಆಗಮಿಸುತ್ತಿರುವುದರಿಂದ ಹಿಂಸಾಚಾರ ಹೆಚ್ಚಾಗುತ್ತಿದೆ. ಇತ್ತೀಚೆಗೆ ಅಪಹರಿಸಿದ್ದ 6 ಜನರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಈಗಾಗಲೇ ಮಣಿಪುರದಲ್ಲಿ 288 ತುಕಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಹೆಚ್ಚುವರಿ 90 ತುಕಡಿಗಳು ಅಂದರೆ 10,800 ಸೈನಿಕರನ್ನು ನಿಯೋಜಿಸಲಾಗುತ್ತಿದೆ.
2023ರಲ್ಲಿ ಆರಂಭವಾದ ಮಣಿಪುರ ಹಿಂಸಾಚಾರದಲ್ಲಿ ಇದುವರೆಗೆ 233 ಮಂದಿ ಮೃತಪಟ್ಟಿದ್ದಾರೆ. ಹಿಂಸಾಚಾರ ತಡೆಗೆ ಹೆಚ್ಚುವರಿ ಸೇನೆ ಕಳುಹಿಸಲಾಗಿದ್ದು, ಕೆಲವು ತುಕಡಿಗಳು ರಾಜಧಾನಿ ಇಂಫಾಲಗೆ ಬಂದಿಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಯುತಿ ಮತ್ತು ಕುಕ್ಕಿ ಸಮುದಾಯಗಳ ನಡುವೆ ಆರಂಭವಾದ ಹಿಂಸಾಚಾರ ವರ್ಷ ಪೂರೈಸಿದ್ದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಗಲಭೆಕೋರರು ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿಯಿಂದ ಕಸಿದುಕೊಂಡಿದ್ದ ಸುಮಾರು 3000 ಶಸ್ತ್ರಾಸ್ತ್ರಗಳನ್ನು ಮರಳಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.