ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ಮರಳುವಾಗ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 13 ಮಂದಿ ಮೃತಪಟ್ಟ ದಾರುಣ ಘಟನೆ ಹಾವೇರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದ ನಿವಾಸಿಗಳು ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.
ನಿದ್ದಪ್ಪ (45), ಶರಣು (40), ಯಲ್ಲಪ್ಪ (50), ನಾಗೇಶ್ (40), ನಾಗೇಶ್ (18) ಯಲ್ಲಪ್ಪ (65), ಗಣೇಶಪ್ಪ (65), ರಂಗನಾಥ ಸ್ವಾಮಿ (62) ಮತ್ತು ಇವರ 6 ಮತ್ತು 4 ವರ್ಷದ ಇಬ್ಬರು ಮಕ್ಕಳು, ಚಾಲಕ ನಾಗೇಶ್ (23), ಶರಣಪ್ಪ (24), ಪರಶುರಾ (40), ಮಂಜುಳಾ ರಾಮಕೃಷ್ಣ (50) ಎಂದು ಗುರುತಿಸಲಾಗಿದೆ.
ತಿಂಗಳ ಹಿಂದೆಯಷ್ಟೇ ಹೊಸದಾಗಿ ಖರೀದಿಸಿದ್ದ ಟಿಟಿಯಲ್ಲಿ ಸವದತ್ತಿ, ಚೆನ್ನಗಿರಿ ಸೇರಿದಂತೆ ಯಾತ್ರೆಗೆ ಚಾಲಕ ಆದರ್ಶನ ಮನೆಯವರು ಹೊರಟ್ಟಿದ್ದರು. ಪೂಜೆ ಮುಗಿಸಿಕೊಂಡು ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದೆ. ಪರಿಣಾಮ ಟಿಟಿ ವಾಹನ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಪೊಲೀಸರು ಮೃತರ ಹಿನ್ನೆಲೆ ಪತ್ತೆ ಹಚ್ಚುತ್ತಿದ್ದಾರೆ.