ವಿಮಾನ ನಿಲ್ದಾಣದ ನಿರ್ವಹಣೆ ಕಳಪೆ ಹಾಗೂ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಯಾನ ನಿರ್ದೇಶನಾಲಯ 20 ಲಕ್ಷ ರೂ. ದಂಡ ವಿಧಿಸಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೋಟಿಸ್ ಜಾರಿ ಮಾಡಿದ್ದು, 20 ಲಕ್ಷ ರೂ. ದಂಡವನ್ನು ನೊಟೀಸ್ ತಲುಪಿದ 30 ದಿನಗಳ ಒಳಗೆ ಪಾವತಿಸಬೇಕು ಎಂದು ವಿಮಾನಯಾನ ನಿರ್ದೇಶನಾಲಯ ಆಪರೇಷನ್ಸ್ ವಿಭಾಗದ ನಿರ್ದೇಶಕ ಚಂದ್ರ ಮಣಿ ಪಾಂಡೆ ಆದೇಶಿಸಿದ್ದಾರೆ.
ಕಳೆದ ಜುಲೈ 10 ರಿಂದ 12ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭ ನಿರ್ವಹಣೆ ಕೊರತೆ ಗಮನಕ್ಕೆ ಬಂದಿತ್ತು. ವಿಮಾನಯಾನಕ್ಕೆ ಅಗತ್ಯ ಮಾನದಂಡ ಮತ್ತು ಸುರಕ್ಷತೆ ಕ್ರಮ ಕೈಗೊಳ್ಳದ ಹಿನ್ನೆಲೆ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಗತ್ಯ ಸಂಖ್ಯೆಯ ಉಸಿರಾಟದ ಉಪಕರಣಗಳು, ರಕ್ಷಣಾ ಉಡುಪು ಇಲ್ಲ. ಅಗ್ನಿಶಾಮಕ ವಿಭಾಗದಲ್ಲಿ 18 ಸಿಬ್ಬಂದಿ ಇದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಹಾಜರಾತಿ ಪುಸ್ತಕದ ಪರಿಶೀಲನೆ ವೇಳೆ 13 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಕ್ರಾಶ್ ಫೈರ್, ಟೆಂಡರ್ ಫೈರ್ ಇಂಜಿನ್ ನಿರ್ವಹಣೆಗೆ ಸಿಬ್ಬಂದಿ ಇಲ್ಲ. ಸಿಎಫ್‌ಟಿ ವಾಹನ ಟೆಸ್ಟ್ಗಳ ರೆಕಾರ್ಡ್ ಇರಲಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ರನ್ ವೇ ಅಂಡ್ ಸೇಫ್ಟಿ ಏರಿಯಾ ನಿರ್ವಹಣೆ ಸಮರ್ಪಕವಾಗಿಲ್ಲ. ರನ್ ವೇನಲ್ಲಿ ಟ್ರಾನ್ಸ್ ವರ್ಸ್ ಭಾಗದಲ್ಲಿ ಮಣ್ಣು ಕುಸಿತ ಸೇರಿದಂತೆ ಕೆಲವು ನ್ಯೂನತೆಗಳಿದ್ದು, ನಿರ್ವಹಣೆ ಸರಿ ಇಲ್ಲ. ರನ್ ವೇ ಭಾಗದಲ್ಲಿ ಕಲ್ಲುಗಳು ಪತ್ತೆಯಾಗಿವೆ. ರನ್ ವೇ ಅಂಚಿನಲ್ಲಿ ಲೈಟ್ ಪ್ಯಾನಲ್‌ಗಳ ನಿರ್ವಹಣೆ ಸರಿ ಇಲ್ಲ ಎಂದು ತಿಳಿಸಲಾಗಿದೆ.
ನ್ಯೂನತೆಗಳ ಕುರಿತು ವಿಮಾನಯಾನ ನಿರ್ದೇಶನಾಲಯವು ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಆ.1ರಂದು ನೊಟೀಸ್ ಜಾರಿ ಮಾಡಿತ್ತು. ಹತ್ತು ದಿನದ ಬಳಿಕ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಉತ್ತರ ನೀಡಿತ್ತು. ಆದರೆ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿ ನೋಟಿಸ್ ನೀಡಿದೆ.