ಕಾರ್ಗಿಲ್ ವಿಜಯೋತ್ಸವದ 25 ವಾರ್ಷಿಕೋತ್ಸವದ ಪ್ರಯುಕ್ತ ಮಾಜಿ ಯೋಧೆ 165 ಕಿ.ಮೀ. ದೂರದ ಓಟವನ್ನು ಪೂರೈಸಿದ ಸಾಧನೆ ಮಾಡಿದ್ದಾರೆ.
ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಭಾರ್ಷಾ ರೈ ತಮ್ಮ ಜೊತೆ ತಂಡವನ್ನು ಮುನ್ನಡೆಸಿದ್ದು, ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಡ್ರಾಸ್ ವರೆಗಿನ 165 ಕಿ.ಮೀ. ದೂರ ಓಡಿ ಗುರಿ ಮುಟ್ಟಿದ್ದಾರೆ. 4 ದಿನಗಳಲ್ಲಿ ಓಟ ಪೂರೈಸಿದ ಮೂಲಕ ಮಹಿಳೆಯೊಬ್ಬರು ಈ ಸಾಧನೆ ಮಾಡಿರುವುದು ವಿಶೇಷ.
ಭಾರ್ಷಾ ರೈ ಅವರ ಪತಿ ಕೂಡ ಕಾಶ್ಮೀರದಲ್ಲಿ ಸೇನೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಭಾರ್ಷಾ ರೈ ಶ್ರೀನಗರದಿಂದ ದಾರ್ಸಾ ಸೆಕ್ಟರ್ ನಲ್ಲಿ ನಿರ್ಮಿಸಲಾಗಿರುವ ಕಾರ್ಗಿಲ್ ಸ್ಮಾರಕದವರೆಗೆ ಓಡಿದ್ದಾರೆ. ಪ್ರತಿದಿನ ಸುಮಾರು 40 ಕಿ.ಮೀ. ದೂರದ ಪೂರೈಸುತ್ತಿದ್ದ ಭಾರ್ಷಾ ಕೇವಲ 2 ದಿನದಲ್ಲಿ 9000 ಅಡಿ ಮೇಲಿರುವ ಸೋನಾಮಾರ್ಗ್ ತಲುಪಿದ್ದರು.
ಮೂರನೇ ದಿನ 11942 ಅಡಿ ಎತ್ತರದಲ್ಲಿರುವ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿರುವ ಜೊಯಿಲಾ ಪಾಸ್ ತಲುಪಿದರು. 4ನೇ ದಿನ ದಾರ್ಸಾ ಸೆಕ್ಟರ್ ತಲುಪಿದ್ದಾರೆ.
ನಾನು 7ನೇ ತರಗತಿಯಲ್ಲಿ ಓದುತ್ತಿದ್ದಾಗ ಕಾರ್ಗಿಲ್ ಯುದ್ಧ ನಡೆಯಿತು. ಆಗ ನನ್ನ ತಂದೆ ಸೇನೆಯಿಂದ ನಿವೃತ್ತಿ ಪಡೆದು 10 ವರ್ಷಗಳಾಗಿತ್ತು. ಯುದ್ಧ ಆರಂಭವಾಗುತ್ತಿದ್ದಂತೆ ತಮ್ಮ ತಂಡದ ಜೊತೆ ಮತ್ತೆ ಸೇನೆಗೆ ಮರಳಿದ್ದರು. ಆ ದಿನಗಳು ಸೈನಿಕರ ಕುಟುಂಬದಲ್ಲಿ ದೊಡ್ಡ ಸವಾಲಿನ ದಿನಗಳಾಗಿದ್ದವು ಎಂದು ಅವರು ಭಾರ್ಷಾ ರೈ ಹೇಳಿದರು.
ನನ್ನ ಪಾಲಿಗೆ ಇದು ಕೇವಲ ಓಟ ಅಷ್ಟೆ. ಆದರೆ ಕಾರ್ಗಿಲ್ ಯುದ್ಧದಲ್ಲಿ ಯೋಧರನ್ನು ಕಳೆದುಕೊಂಡ ಕುಟುಂಬ ತ್ಯಾಗವನ್ನು ನೆನೆಯುವ ಅಪರೂಪದ ದಿನ ಎಂಬುದು ನನ್ನ ಭಾವನೆ. ಯೋಧರ ತ್ಯಾಗ-ಬಲಿದಾನ ಸ್ಮರಿಸುವ ಕೆಲಸ ಎಂದು ಅವರು ಹೇಳಿದರು.