ರಸ್ತೆಬದಿಯಲ್ಲಿ ವಿವಿಧೆಡೆ ಮಾರಾಟ ಮಾಡುತ್ತಿದ್ದ ಮೊಮೊ ಸೇವಿಸಿ 33 ವರ್ಷದ ಮಹಿಳೆ ಮೃತಪಟ್ಟಿದ್ದು 20 ಮಂದಿ ಅಸ್ವಸ್ಥಗೊಂಡ ಘಟನೆ ಹೈದರಾಬಾದ್ ನಲ್ಲಿ ಸಂಭವಿಸಿದೆ.
ಬಾಂಜಾರ ಹಿಲ್ಸ್ ಪ್ರದೇಶದ ವಿವಿದೆಡೆ ಒಂದೇ ದಿನ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಮೊಮೊ ಸೇವಿಸಿ ಈ ದುರಂತ ಸಂಭವಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಖೈರತಾಬಾದ್ ನಲ್ಲಿ ಶುಕ್ರವಾರ ರೇಷ್ಮಾ ಬೇಗಂ 12 ಮತ್ತು 14 ವರ್ಷದ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಮೊಮೊ ಸೇವಿಸಿದ್ದಾರೆ. ಮೊಮೊ ಸೇವಿಸಿದ ಬೆನ್ನಲ್ಲೇ ಹೊಟ್ಟೆನೋವು ಕಾಣಿಸಿಕೊಂಡಿದ್ದು ವಾಂತಿ ಶುರುವಾಗಿ ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥಗೊಂಡಿದ್ದ ರೇಷ್ಮಾ ಬೇಗಂ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಭಾನುವಾರ ಬೆಳಿಗ್ಗೆ ರೇಷ್ಮಾ ಬೇಗಂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ, ಇಬ್ಬರು ಮಕ್ಕಳ ಚಿಕಿತ್ಸೆ ಮುಂದುವರಿದಿದೆ.
ಒಂದೇ ಕಡೆಯಿಂದ ನಗರದ ಬೇರೆ ಬೇರೆ ಪೂರೈಕೆಯಾದ ಮೊಮೊ ಸೇವಿಸಿ 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಮಾಹಿತಿ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ಮುಂದುವರಿದಿದೆ ಎಂದು ಬಂಜಾರ ಹಿಲ್ಸ್ ಪೊಲೀಸ್ ಇನ್ ಸ್ಪೆಕ್ಟರ್ ರಾಮ್ ಬಾಬು ತಿಳಿಸಿದ್ದಾರೆ.
ಇತ್ತೀಚೆಗೆ ಹೈದರಾಬಾದ್ ನಲ್ಲಿ ಆಹಾರ ಗುಣಮಟ್ಟದ ಕುರಿತು ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ರಸ್ತೆ ಬದಿ ಸಣ್ಣ ಹೋಟೆಲ್ ಗಳ ಆಹಾರ ಗುಣಮಟ್ಟ, ಸ್ವಚ್ಛತೆಗೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಈ ದುರಂತಕ್ಕೆ ಸಾಕ್ಷಿಯಾಗಿದೆ.