ಶತಕೋಟ್ಯಾಧಿಪತಿ ಉದ್ಯಮಿ ಕುಟುಂಬವಾದ ಹಿಂದುಜಾ ಕುಟುಂಬದ ನಾಲ್ವರು ಸದಸ್ಯರಿಗೆ ಮನೆಕೆಲಸದ ಸಿಬ್ಬಂದಿಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ಸ್ವಿಜರ್ ಲೆಂಡ್ ನ್ಯಾಯಾಲಯ ಸುಮಾರು 4.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲೇಕ್ ಜಿನೆವಾದಲ್ಲಿ ನಡೆದ ವಿಚಾರಣೆಯಲ್ಲಿ ಹಿಂದುಜಾ ಕುಟುಂಬದ ವಿರುದ್ಧದ ಮಾನವ ಕಳ್ಳಸಾಗಾಣೆ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿದೆ.
47 ಶತಕೋಟಿ ಡಾಲರ್ ಆಸ್ತಿ ಹೊಂದಿರುವ ಹಿಂದುಜಾ ಕುಟುಂಬದ ಸದಸ್ಯರಾದ ಪ್ರಕಾಶ್ ಹಿಂದುಜಾ, ಪತ್ನಿ ಕಮಲ್ ಹಿಂದೂಜಾ, ಪುತ್ರ ಅಜಯ್ ಮತ್ತು ಪುತ್ರಿ ನರ್ಮತಾಗೆ ತಲಾ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹಿಂದುಜಾ ಕುಟುಂಬದವರು ಭಾರತದಿಂದ ಕೆಲಸಕ್ಕಾಗಿ ಕರೆಸಿಕೊಳ್ಳುತ್ತಿದ್ದರು. ನಂತರ ಅವರ ಪಾಸ್ ಪೋರ್ಟ್ ಕಸಿದುಕೊಂಡು ದೌರ್ಜನ್ಯ ಎಸಗುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ವಿಚಾರಣೆ ವೇಳೆ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕಾಶ್ ಹಿಂದುಜಾ ಅವರಿಗೆ 78 ಮತ್ತು ಕಮಲ್ ಹಿಂದುಜಾಗೆ 75 ವರ್ಷ ಆಗಿದ್ದು, ವೃದ್ಧಾಪ್ಯದ ಕಾರಣ ವಿಚಾರಣೆಯಿಂದ ವಿನಾಯಿತಿ ಪಡೆದಿದ್ದರು. ಮನೆ ಕೆಲಸದವರಿಗೆ ಮಾಸಿಕ 250ರಿಂದ 450 ಡಾಲರ್ ಅಂದರೆ ಸುಮಾರು 5000 ಸಾವಿರದಿಂದ 10 ಸಾವಿರ ರೂ. ನೀಡಲಾಗುತ್ತಿತ್ತು. ಸ್ವಿಜರ್ ಲೆಂಡ್ ನಲ್ಲಿ ನಿಗದಿಪಡಿಸಲಾಗಿರುವ ಕನಿಷ್ಠ ವೇತನಕ್ಕಿಂತ ತುಂಬಾ ಕಡಿಮೆ ಆಗಿದೆ.
ಹಿಂದುಜಾ ಕುಟುಂಬ ತಮ್ಮ ಹಣಬಲ ಹಾಗೂ ಪ್ರಭಾವ ಬಳಸಿ ನೌಕರರಿಗೆ ಸೂಕ್ತ ವೇತನವನ್ನೂ ನೀಡದೇ ತಮಗೆ ಇಷ್ಟ ಬಂದಂತೆ ನಡೆಸಿಕೊಂಡಿರುವುದು ದೃಢಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.