ಮರಾಠಿ, ಬೆಂಗಾಲಿ, ಪಾಲಿ, ಪ್ರಕೃತ್ ಮತ್ತು ಅಸ್ಸಾಮಿ ಸೇರಿದಂತೆ 5 ಭಾಷೆಗಳಿಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಗಳಾಗಿ ಘೋಷಿಸಿದೆ. ಈ ಮೂಲಕ ದೇಶದಲ್ಲಿ ಕನ್ನಡ, ತಮಿಳು ಸೇರಿದಂತೆ ಶಾಸ್ತ್ರೀಯ ಭಾಷೆಗಳ ಸಂಖ್ಯೆ 11ಕ್ಕೇರಿದೆ.
ಕನ್ನಡ, ತಮಿಳು, ಮಲಯಾಳಂ, ಒರಿಯಾ, ತೆಲುಗು ಮತ್ತು ಸಂಸ್ಕೃತ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳಾಗಿ ಮಾನ್ಯತೆ ನೀಡಲಾಗಿತ್ತು. ಇದೀಗ ಹೊಸದಾಗಿ 5 ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಭವ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಒರಿಯಾ ಮತ್ತು ಸಂಸ್ಕೃತ ಹೊರತುಪಡಿಸಿ ಶಾಸ್ತ್ರೀಯ ಸ್ಥಾನ ಪಡೆದ ಉಳಿದ ನಾಲ್ಕು ಭಾಷೆಗಳು ದಕ್ಷಿಣ ಭಾರತದ್ದಾಗಿತ್ತು. ಆದರೆ ಇದೀಗ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಉತ್ತರ ಭಾರತದ ರಾಜ್ಯಗಳ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದೆ.
5 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಭಾರತೀಯ ಭಾಷೆಗಳ ಸಂಸ್ಕೃತಿ ಮತ್ತು ಇತಿಹಾಸ ಅಭೂತಪೂರ್ವವಾಗಿದ್ದು, ಈ ಭಾಷೆಗಳ ಅಧ್ಯಯನ ಮತ್ತು ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.