ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರರಿಗೆ ಹಂಚಿಕೆಯಾಗುತ್ತಿರು ವೇತನ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ರಿಂಕು ಸಿಂಗ್ ನೀಡಿದ ಉತ್ತರ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಕೋಲ್ಕತಾ ನೈಟ್ ರೈಡರ್ಸ್ ಫೈನಲ್ ನಲ್ಲಿ ಗೆಲ್ಲಲು ಮಹತ್ವದ ಪಾತ್ರ ವಹಿಸಿದ ಮಿಚೆಲ್ ಸ್ಟಾರ್ಕ್ ಅವರನ್ನು ಹರಾಜಿನಲ್ಲಿ 24.75 ಕೋಟಿ ರೂ.ಗೆ ಖರೀದಿಸಲಾಗಿತ್ತು. ಒಂದು ಎಸೆತಕ್ಕೆ ಅವರು ಪಡೆದ ಶುಲ್ಕ 7 ಲಕ್ಷ ರೂ. ಆಗಿದೆ.
2018ರಲ್ಲಿ 80 ಲಕ್ಷಕ್ಕೆ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮಾರಾಟವಾಗಿದ್ದ ರಿಂಕು ಸಿಂಗ್ ಈ ಬಾರಿ ತಂಡದಲ್ಲೂ ಉತ್ತಮ ಅವಕಾಶ ಸಿಗಲಿಲ್ಲ. ಅಲ್ಲದೇ ಅವರಿಗೆ ಕೇವಲ 55 ಲಕ್ಷ ರೂ. ಲಭಿಸಲಿದೆ. ವಿಶೇಷ ಅಂದರೆ ರಿಂಕು ಸಿಂಗ್ ಕಳೆದ ಆವೃತ್ತಿಯಲ್ಲಿ ಕೊನೆಯ ಓವರ್ ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಸ್ಟಾರ್ ಆಟಗಾರನಾಗಿ ಸಂಚಲನ ಸೃಷ್ಟಿಸಿದ್ದರು.
ಭಾರತ ತಂಡದ ಬಾಗಿಲು ಬಡಿಯುತ್ತಿರುವ ರಿಂಕು ಸಿಂಗ್ ಗೆ 55 ಲಕ್ಷ ರೂ. ಸಿಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ವರ್ಷಕ್ಕೆ 55 ಲಕ್ಷ ಸಿಗುತ್ತಿರುವುದಕ್ಕೆ ಬೇಸರವಿಲ್ಲ. ಒಂದು ಕಾಲದಲ್ಲಿ ಇಷ್ಟು ದೊಡ್ಡ ಮೊತ್ತ ದುಡಿಯುತ್ತೇನೆ ಎಂದು ಊಹಿಸಿಯೂ ಇರಲಿಲ್ಲ ಎಂದು ಅವರು ಹೇಳಿದರು.
ನಾನು ಕ್ರಿಕೆಟ್ ಗೆ ಕಾಲಿಡುವ ಮುನ್ನ ದಿನಕ್ಕೆ 10-15 ರೂ. ದುಡಿಯುತ್ತಿದ್ದೆ. ಅಷ್ಟು ಸಿಕ್ಕರೂ ದೊಡ್ಡದು ಎಂದು ಭಾವಿಸಿದ್ದೆ. ಈಗ 55 ಲಕ್ಷ ರೂ. ಬರುತ್ತಿದೆ ಅಂದರೆ ಅದರಿಂದ ನಾನು ತೃಪ್ತನಾಗಿದ್ದೇನೆ. ಪಾಲಿಗೆ ಬಂದದ್ದು ಪಂಚಾಮೃತ ಎಂಬುದು ನನ್ನ ಅಭಿಪ್ರಾಯ ಎಂದು ರಿಂಕು ಹೇಳಿದರು.
ನಾನು ಭೂಮಿಯ ಮೇಲೆ ಇರಲು ಬಯಸುತ್ತೇನೆ. ಒಂದು ವಿಷಯ ಹೇಳಬೇಕು ಏನಂದರೆ ನಾನು ಭೂಮಿಯ ಮೇಲೆ ಬಂದಾಗ ಏನೂ ತರಲಿಲ್ಲ. ಹೋಗುವಾಗ ಏನೂ ತೆಗೆದುಕೊಂಡು ಹೋಗಲ್ಲ. ಹಾಗಿದ್ದ ಮೇಲೆ ಈ ಹಣದ ಲೆಕ್ಕ ಎಲ್ಲಿಯವರೆಗೆ ಬರುತ್ತದೆ. ಇರುವುದರಲ್ಲೇ ತೃಪ್ತಿಪಡುವ ಮನೋಭಾವ ನನ್ನದು ಎಂದು ಅವರು ಹೇಳಿದರು.