ಪ್ರಖ್ಯಾತ ಸೋಮನಾಥ ದೇವಸ್ಥಾನದ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದ್ದ 60 ಕೋಟಿ ರೂ. ಮೌಲ್ಯದ 15 ಹೆಕ್ಟೇರ್ ಜಮೀನನ್ನು ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ಜಿಲ್ಲಾಡಳಿತ ನೆಲಸಮ ಮಾಡುವ ಮೂಲಕ ಭೂಮಿ ಮರು ವಶಪಡಿಸಿಕೊಂಡಿದೆ.
ಶನಿವಾರ ಸೋಮನಾಥ ದೇವಸ್ಥಾನದ ಬಳಿಯ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ 135 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮನಾಥ ದೇಗುಲದ ವೆರಾವಲ್‌ನಲ್ಲಿರುವ ಪ್ರಭಾಸ್ ಪಟಾನ್‌ನಲ್ಲಿರುವ ಸರ್ಕಾರಿ ಭೂಮಿಯಲ್ಲಿನ ಅನಧಿಕೃತ ಕಟ್ಟಡಗಳನ್ನು ನೆಲಮಗೊಳಿಸಲು 800ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿತ್ತು. ದೇವಸ್ಥಾನದ ಜಾಗದಲ್ಲಿ 45 ವಿವಿಧ ಧರ್ಮಗಳ ಮುಖಂಡರ ಅಂಗಡಿ, ಧಾರ್ಮಿಕ ಕಟ್ಟಡ ಸೇರಿದಂತೆ ವಿವಿಧ ರೀತಿಯಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿತ್ತು.
ಶನಿವಾರ ಮುಂಜಾನೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಧಾರ್ಮಿಕ ಕಟ್ಟಡಗಳು ಮತ್ತು ಕಾಂಕ್ರೀಟ್ ಮನೆಗಳನ್ನು ನೆಲಸಮ ಮಾಡಲಾಗಿದ್ದು, 60 ಕೋಟಿ ಮೌಲ್ಯದ ಸುಮಾರು 15 ಹೆಕ್ಟೇರ್ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಗೆ 52 ಟ್ರ್ಯಾಕ್ಟರ್‌ಗಳು, 58 ಬುಲ್ಡೋಜರ್‌ಗಳು, 2 ಹೈಡ್ರಾ ಕ್ರೇನ್‌ಗಳು, 5 ಡಂಪರ್‌ಗಳು, 2 ಆಂಬುಲೆನ್ಸ್ ಮತ್ತು 3 ಅಗ್ನಿಶಾಮಕ ದಳ ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು.
800 ಪೊಲೀಸ್ ಸಿಬ್ಬಂದಿ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆ (ಎಸ್‌ಆರ್‌ಪಿಎಫ್) ಅನ್ನು ಹಿರಿಯ ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ನಿಯೋಜಿಸಲಾಗಿದೆ. ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು, ನಾಲ್ವರು ಪೊಲೀಸ್ ಉಪ ಅಧೀಕ್ಷಕರು, 12 ಇನ್‌ಸ್ಪೆಕ್ಟರ್‌ಗಳು, 24 ಸಬ್ ಇನ್‌ಸ್ಪೆಕ್ಟರ್‌ಗಳು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳು ಉಪಸ್ಥಿತರಿದ್ದರು.