ಬೆಂಗಳೂರು: ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹಠಾತ್ ಬಂಡೆ ಬಿದ್ದು 7 ಮಂದಿ ಕಾರ್ಮಿಕರು ಮೃತಪಟ್ಟಿರುವ ದಾರಣ ಘಟನೆ ಗುರುವಾರ ಬೆಳಿಗ್ಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕರೆಯ ಮಾದಪಟ್ಟಣದಲ್ಲಿ ಸಂಭವಿಸಿದೆ.
ಬಿಹಾರ ಮತ್ತು ಅಸ್ಸಾಂ ಮೂಲದ ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮ ವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಮೃತಪಟ್ಟಿದ್ದಾರೆ.
ದುರಂತದಲ್ಲಿ ಉತ್ತರ ಭಾರತದ ನಾಲ್ವರು, ಕರ್ನಾಟಕದ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಾದ ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21), ಆನಂದ್ (30) ಅವರನ್ನು ಮೈಸೂರು ರಸ್ತೆಯಲ್ಲಿರುವ ಆರ್.ಆರ್.ಆಸ್ಪತ್ರೆಗೆ ದಾಖಲಸಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂಡೆ ಬಿದ್ದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದರೆ, ಮೂರು ಟ್ಯಾಕ್ಟರ್ ಗಳು ಸಂಪೂರ್ಣ ಜಖಂಗೊಂಡಿವೆ.
ಮಾದಪಟ್ಟಣದಲ್ಲಿನ ಕಾವೇರಿ ಕಂಪನಿಗೆ ಸೇರಿದ ಕ್ರಷರ್ ನಲ್ಲಿ ಬೆಳಿಗ್ಗೆ 7:30ರ ವೇಳೆ
ಕಲ್ಲು ಕ್ವಾರಿಯ ಮೇಲ್ಬಾಗದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ 16 ಮಂದಿ ಕಾರ್ಮಿಕರು ಭಾರೀ ಗಾತ್ರದ ಬಂಡೆ ಜರುಗಿಸುವಾಗ ದುರದೃಷ್ಟವಶಾತ್, ನಿಯಂತ್ರಣ ತಪ್ಪಿದ ಬಂಡೆಯು ನೇರವಾಗಿ ಕ್ವಾರಿಯ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಬಂಡೆ ಬಿದ್ದ ತೀವ್ರತೆಗೆ ಸಿಲುಕಿದ ಒಂಬತ್ತು ಜನ ಕಾರ್ಮಿಕರು ಕ್ಷಣಮಾತ್ರದಲ್ಲಿ ಜೀವಬಿಟ್ಟಿದ್ದಾರೆ.
ಬಿಹಾರ ಮತ್ತು ಅಸ್ಸಾಂ ಮೂಲದ ಕಾರ್ಮಿಕರಾದ ಮೃತರು ಹಾಗೂ ಗಾಯಗೊಂಡ ಎಲ್ಲರೂ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಕಾವೇರಿ ಕ್ರಷರ್‌ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು.
ದುರಂತ ಸಂಭವಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಚೀರಾಟ, ಆಕ್ರಂದನ ಮುಗಿಲು ಮುಟ್ಟಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಮತ್ತು ಇತರ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಬಂಡೆಯಡಿ ಸಿಲುಕಿದ್ದ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಉಳಿದ ಮೃತದೇಹಗಳನ್ನು ಹೊರತೆಗೆದು,ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
16 ಕಾರ್ಮಿಕರು ಕೆಲಸ
ಘಟನಾ ಸ್ಥಳಕ್ಕೆ ಭೇಟಿ ಬಳಿಕ ಮಾತನಾಡಿರುವ ಕೇಂದ್ರ ವಲಯ ಡಿಜಿಪಿ ಎಸ್.ಗಿರೀಶ್, ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆಯಿದ್ದ ಕ್ವಾರಿಯಲ್ಲಿ 16 ಕಾರ್ಮಿಕರು ಕೆಲಸ ಮಾಡ್ತಿದ್ದರು. ಬಂಡೆ ಬಿದ್ದು 16 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಗುತ್ತಿಗೆದಾರ (ಮೇಸ್ತ್ರಿ) ಮತ್ತು ಕ್ರಷರ್ ಮಾಲೀಕರನ್ನು ಸ್ಥಳಕ್ಕೆ ಕರೆಸಿ, ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಹೇಳಿದರು.
ಅಂದು ಚಿರತೆ ಬಲಿ:
ಹಿಂದೆ ಇದೇ ಹುಲವೇನಹಳ್ಳಿ ಮತ್ತು ಮಾದಾಪಟ್ಟಣ ಭಾಗದ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ಬಂಡೆ ಸ್ಫೋಟಿಸಿದಾಗ ಕಲ್ಲು ಸಿಡಿದು ಚಿರತೆಯೊಂದು ಸಾವನ್ನಪ್ಪಿತ್ತು. ಆಗಲೇ ಈ ಭಾಗದ ಕ್ವಾರಿಗಳ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಿಂದಾಗಿ ಇಂದು ಚಿರತೆಯ ಬೆನ್ನಲ್ಲೇ ಒಂಬತ್ತು ಮಂದಿ ಅಮಾಯಕರು ಬಲಿಯಾಗಿದ್ದಾರೆ.
ಸಂಪೂರ್ಣ ಉಲ್ಲಂಘನೆ
ಕ್ವಾರಿಯ ಮೇಲ್ಬಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಟ್ರ್ಯಾಕ್ಟರ್ ಬಳಸಿ ಬಂಡೆ ಜರುಗಿಸುವಾಗ ಕೆಳಗೆ ಕಾರ್ಮಿಕರು ಕೆಲಸ ಮಾಡಲು ಹೇಗೆ ಬಿಡಲಾಯಿತು? ಯಾವುದೇ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲವೆ ಎನ್ನುವುದರ ಕುರಿತು ತನಿಖೆಯನ್ನು ಕೈಗೊಳ್ಳಲಾಗಿದೆ.



