80 ಸಾವಿರ ಜನರು ಸೇರುವ ಕಿರಿದಾದ ಜಾಗದಲ್ಲಿ ಎರಡೂವರೆ ಲಕ್ಷ ಜನ ಸೇರಿದ್ದು, ಬಿಸಿಲು, ಧೂಳು ಹಾಗೂ ಪೂರ್ವ ಸಿದ್ಧತೆ ಕೊರತೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.
ಹತ್ರಾಸ್ ನಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಜಾಗದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿದ ದುರಂತದಲ್ಲಿ 121ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ.
ಅತ್ಯಂತ ಕಿರಿದಾದ ಜಾಗದಲ್ಲಿ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನರು ಒಬ್ಬರ ಮೇಲೊಬ್ಬರು ಎಂಬಂತೆ ಕುಳಿತಿದ್ದರಿಂದ ಹೆಚ್ಚು ಸಮಯ ಒಂದೇ ಕಡೆ ಇರಲು ಕಷ್ಟಪಡುತ್ತಿದ್ದರು. ಬಿಸಿಲಿನ ಝಳ ಹಾಗೂ ಬಿಸಿಗಾಳಿಯಿಂದ ಧೂಳು ಎದ್ದಿದ್ದು, ಕೂರಲು ಆಗದೇ ಕೆಲವರು ಎದ್ದು ಹೊರಗೆ ಹೋಗಲು ಯತ್ನಿಸಿದರು.
ಈ ವೇಳೆ ಪ್ರವಚನ ನೀಡುತ್ತಿದ್ದ ಭೋಲೆ ಬಾಬಾ ಕಾರ್ಯಕ್ರಮದ ಮಧ್ಯದಲ್ಲಿ ಹೋಗಬೇಡಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಸ್ವಯಂಸೇವಕರು ಹೊರಗೆ ಹೋಗಲು ವ್ಯವಸ್ಥೆ ಮಾಡುವುದಾಗಿ ಸರತಿ ಸಾಲಿನಲ್ಲಿ ಬರುವಂತೆ ಸೂಚಿಸಿದ್ದರಿಂದ ಜನರು ಬಿಸಿಲು ತಡೆಯದೇ ಹೊರಗೆ ಹೋಗಲು ಮುಗಿಬಿದ್ದಿದ್ದರು. ಇದರಿಂದ ನೂಕುನುಗ್ಗಲು ಶುರುವಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಕೂಡ ಸರಿಯಾದ ವ್ಯವಸ್ಥೆ ಇರಲಿಲ್ಲ. ಇದರಿಂದ ಟೆಂಪೊ, ಲಾರಿಗಳಲ್ಲಿ ಗಾಯಗೊಂಡವರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಸಮುದಾಯದ ಭವನದ ಬಳಿ ನೂರಾರು ಜನರ ಶವಗಳು ಎಲ್ಲೆಂದರಲ್ಲಿ ಬಿದ್ದು ಭೀಕರ ವಾತಾವರಣ ಸೃಷ್ಟಿಯಾಗಿತ್ತು.
ಘಟನಾ ಸ್ಥಳದಲ್ಲಿ ಭದ್ರತೆಗಾಗಿ 40ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.