ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಬಗೆದಷ್ಟು ಆಳವಾದ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದ್ದು, ಸಿಐಡಿ ಪೊಲೀಸರ ತನಿಖೆ ವೇಳೆ ದನ ಮೇಯಿಸೋರು, ಎಮ್ಮೆ ಕಾಯೋರ ಬ್ಯಾಂಕ್ ಖಾತೆಗಳಿಗೆ ಕೋಟಿ ಕೋಟಿ ಹಣ ಜಮೆ ಆಗಿರುವುದು ಬೆಳಕಿಗೆ ಬಂದಿದೆ.
ಎಸ್ ಐಟಿ ಪೊಲೀಸರು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಈತ ಮಧ್ಯವರ್ತಿಯಾಗಿ ಅರ್ಹತೆ ಇಲ್ಲದವರ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಜಮೆ ಮಾಡಿಸಿರುವುದು ಪತ್ತೆಯಾಗಿದೆ.
ಮಧ್ಯವರ್ತಿ ಮೂಲಕ ದನ ಮೇಯಿಸೋರು, ಎಮ್ಮೆ ಕಾಯೋರು, ಕುರಿ ಮೇಯಿಸುವವರ ಖಾತೆಗಳಿಗೆ 5 ಲಕ್ಷದಿಂದ 2 ಕೋಟಿ ರೂ.ವರೆಗೆ ಪ್ರತಿಯೊಬ್ಬರ ಖಾತೆ ಜಮಾ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಇದೇ ರೀತಿ ಮಧ್ಯವರ್ತಿಗಳ ಮೂಲಕ ಸುಮಾರು 700 ಖಾತೆಗಳಿಗೆ 89 ಕೋಟಿ ರೂ. ಜಮೆ ಮಾಡಲಾಗಿದ್ದು, ಈ ಮೊತ್ತವನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.