ಭಾರತದ ಪ್ರೀತಿ ಪಾಲ್ 100 ಮೀ. ಓಟದ ಸ್ಪರ್ಧೆಯಲ್ಲಿ ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಶುಕ್ರವಾರ ನಡೆದ ವನಿತೆಯರ ಟಿ-35 100 ಮೀ. ಓಟದ ಸ್ಪರ್ಧೆಯಲ್ಲಿ 23 ವರ್ಷದ ಪ್ರೀತಿ ಪಾಲ್ 14.21 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದರು. ಈ ಮೂಲಕ ಓಟದ ಸ್ಪರ್ಧೆಯಲ್ಲಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಪದಕ ತಂದ ಗೌರವಕ್ಕೆ ಪ್ರೀತಿ ಪಾತ್ರರಾದರು.
ಉತ್ತರ ಪ್ರದೇಶದ ಫರಿದಾಬಾದ್ ಮೂಲದ ಪ್ರೀತಿ ಪಾಲ್ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು. ಇದು ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ಪ್ರಸ್ತುತ ಪ್ಯಾರಾಲಿಂಪಿಕ್ಸ್ ನಲ್ಲಿ ಬಂದ ಮೊದಲ ಪದಕವಾಗಿದೆ. ಇದಕ್ಕೂ ಮುನ್ನ ಭಾರತ ಶೂಟಿಂಗ್ ನಲ್ಲಿ ಮೂರು ಪದಕ ಗೆದ್ದ ಸಾಧನೆ ಮಾಡಿದ್ದು, ಭಾರತ ಒಟ್ಟಾರೆ 1 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿದಂತೆ 4 ಪದಕ ಗೆದ್ದುಕೊಂಡಿದೆ.
ಚೀನಾದ ಜುಹು ಕ್ಸಿಯಾ (13.58 ಸೆಕೆಂಡ್) ಮತ್ತು ಗುವಾ ಕ್ವಿನ್ ಕ್ವಿನ್ (13.74ಸೆಕೆಂಡ್) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡರು.
ಹೈಪರ್ಟೊನಿಯಾ, ಅಟಕ್ಸಿಯಾ ಮತ್ತು ಅಥೆಟೊಸಿಸ್ ಮುಂತಾದ ಕಾಯಿಲೆಯಿಂದ ದೇಹದ ಒಂದು ಅಂಗ ಕಳೆದುಕೊಂಡವರು ಟಿ-35 ಸ್ಪರ್ಧಿಸಬಹುದಾಗಿದೆ.
ಪ್ರೀತಿ ಪಾಲ್ ಜಪಾನ್ ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಲ್ಲದೇ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಕೂದಲೆಳೆ ಅಂತರದಿಂದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು.