ಭಾರತ ತಂಡ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಸೋಲರಿಯದ ತಂಡವಾಗಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ.
ಚೀನಾದ ಹುಲನ್ ಬೀರ್ ನಲ್ಲಿ ಶನಿವಾರ ನಡೆದ ಲೀಗ್ ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ನಾಯಕ ಹರ್ಮನ್ ಪ್ರೀತ್ ಸಿಂಗ್ ಸಿಡಿಸಿದ ಎರಡು ಗೋಲುಗಳ ನೆರವಿನಿಂದ ರೋಚಕ ಜಯ ಸಾಧಿಸಿತು.
ಭಾರತ ತಂಡದ ಪರ ಹರ್ಮನ್ ಪ್ರೀತ್ ಸಿಂಗ್ ಎರಡು ಗೋಲು ಬಾರಿಸಿದರೆ, ಪಾಕಿಸ್ತಾನದ ಪರ ಪಂದ್ಯದ 7ನೇ ನಿಮಿಷದಲ್ಲಿಯೇ ಅಹ್ಮದ್ ನದೀಂ ಗೋಲು ಬಾರಿಸಿ ತಂದುಕೊಟ್ಟಿದ್ದ ಮುನ್ನಡೆ ವ್ಯರ್ಥವಾಯಿತು.
ಪಂದ್ಯದ ಕೊನೆಯ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದು ಪಾಕಿಸ್ತಾನ ಸಮಬಲ ಸಾಧಿಸಲು ತೀವ್ರ ಪ್ರಯತ್ನ ನಡೆಸಿದ್ದು, ಈ ವೇಳೆ ಭಾರತದ ಆಟಗಾರನ ಜೊತೆ ಡಿಕ್ಕಿ ಹೊಡೆದಿದ್ದಕ್ಕಾಗಿ ಅಶ್ರಫ್ ರಾಣಾ ಯೆಲ್ಲೋ ಕಾರ್ಡ್ ಪಡೆದು 10 ನಿಮಿಷ ಮೈದಾನ ತೊರೆಯಬೇಕಾಯಿತು. ಇದರಿಂದ ಪಾಕಿಸ್ತಾನ 10 ಆಟಗಾರರೊಂದಿಗೆ ಮಹತ್ವದ ಸಂದರ್ಭದಲ್ಲಿ ಆಡಬೇಕಾದ ಸಂಕಷ್ಟಕ್ಕೆ ಸಿಲುಕಿತು.