ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದ ಅಂಡರ್ ಪಾಸ್ ನಲ್ಲಿ ಕಾರು ಸಿಲುಕಿದ್ದರಿಂದ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಶಿಯರ್ ಮೃತಪಟ್ಟ ಆಘಾತಕಾರಿ ಘಟನೆ ದೆಹಲಿಯ ಫರಿದಾಬಾದ್ ನಲ್ಲಿ ಸಂಭವಿಸಿದೆ.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯ (ಎನ್ ಸಿಆರ್) ನಡುವೆ ಶುಕ್ರವಾರ ತಡರಾತ್ರಿ ಈ ದುರಂತ ಸಂಭವಿಸಿದ್ದು, ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದ್ದರಿಂದ ಕಾರು ಸಿಲುಕಿ ಈ ದುರಂತ ಸಂಭವಿಸಿದೆ.
ಗುರ್ ಗಾಂವ್ ನ ಸೆಕ್ಟರ್ 31ರ ಎಚ್ ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಪುಣ್ಯಶ್ರೇಯಾ ಶರ್ಮ ಮತ್ತು ಕ್ಯಾಶಿಯರ್ ವಿರಜ್ ದ್ವಿವೇದಿ ಮನೆಗೆ ಒಟ್ಟಿಗೆ ಮರಳುವ ಹಾದಿಯಲ್ಲಿ ಮೃತಪಟ್ಟಿದ್ದಾರೆ.
ಫರಿದಾಬಾದ್ ರೈಲ್ವೆ ನಿಲ್ದಾಣದ ಬಳಿಯ ಅಂಡರ್ ಪಾಸ್ ನಲ್ಲಿ ನೀರು ತುಂಬಿ ಹರಿಯುತ್ತಿತ್ತು. ಇದನ್ನು ನೋಡಿಯೂ ಸುರಕ್ಷಿತವಾಗಿ ಹೋಗಬಹುದು ಎಂದು ಭಾವಿಸಿ ಕಾರು ನುಗ್ಗಿಸಿದ್ದಾರೆ. ಆದರೆ ನೀರಿನ ಹರಿವಿನ ಮುಂದೆ ಇವರ ಸಾಹಸ ವ್ಯರ್ಥವಾಗಿದ್ದು ಸಾವಿನಲ್ಲಿ ಅಂತ್ಯಗೊಂಡಿದೆ.
ಅಂಡರ್ ಪಾಸ್ ನಲ್ಲಿ ಕಾರು ಸಿಲುಕಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ. ಪುಣ್ಯಶ್ರೇಯಾ ಅವರ ದೇಹವನ್ನು ಕಾರಿನಿಂದ ಹೊರಗೆ ತೆಗೆಯಲಾಯಿತು. ಆದರೆ ಕ್ಯಾಶಿಯರ್ ದೇಹ ಬೆಳಿಗಿನ ಜಾವ 4 ಗಂಟೆ ಸುಮಾರಿಗೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.