ಸತತವಾಗಿ 90 ದಿನಗಳ ಹಾರಾಟ ನಡೆಸುವ ಸೋಲಾರ್ ವಿಮಾನವನ್ನು ಭಾರತದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಭಾರತ ವೈಮಾನಿಕ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ.
ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೊರೇಟರಿಸ್ (ಎನ್ ಎಎಲ್) ಸಂಸ್ಥೆ ಹೈ ಅಟಿಟ್ಯೂಟ್ ಪ್ಲಾಟ್ ಫಾರ್ಮ್ ಮಾನವರಹಿತ ಸೋಲಾರ್ ವಿಮಾನವನ್ನು ಅಭಿವೃದ್ಧಿಪಡಿಸಿದೆ.
ಬೆಂಗಳೂರಿನ ಏರೋಸ್ಪೇಸ್ ಲ್ಯಾಬೋರೇಟಿಸ್ ಅಭಿವೃದ್ಧಿಪಡಿಸಿದ ವಿಮಾನಗಳಲ್ಲಿ ಎರಡು ಮಾದರಿಯದ್ದಾಗಿದ್ದು, ಮೊದಲನೇಯದು ಸತತ 90 ದಿನಗಳ ಯಾವುದೇ ಅಡೆತಡೆಗಳಿಲ್ಲದೇ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದರೆ ಮತ್ತೊಂದು ಮಿನಿ ವಿಮಾನ ಸತತ 10 ಗಂಟೆಗಳ ವಿಮಾನ ಹಾರಾಟ ನಡೆಸಬಲ್ಲುದಾಗಿದೆ.
ಗಂಟೆಗೆ 17ರಿಂದ 20 ಕಿ.ಮೀ. ವೇಗದಲ್ಲಿ ಹಗಲು ಮತ್ತು ರಾತ್ರಿಯಲ್ಲೂ ಹಾರಾಡುವ ಈ ಸೋಲಾರ್ ವಿಮಾನ ಯಾವುದೇ ಎತ್ತರದಲ್ಲಿ ತಿಂಗಳುಗಟ್ಟಲೇ ಒಂದು ಬಾರಿಯೂ ನಿಲ್ಲದೇ ಹಾರಾಡಬಲ್ಲದು. ಇದು ವಿಶ್ವದಲ್ಲೇ ಅತೀ ಹೆಚ್ಚು ಸತತ ಹಾರಾಟ ನಡೆಸಬಲ್ಲ ವಿಮಾನವಾಗಿದೆ ಎಂದು ಸಂಸ್ಥೆ ಹೇಳಿದೆ.
ಇದೇ ವೇಳೆ ಬೆಂಗಳೂರಿನ ಸ್ಟಾರ್ಟಪ್ ಕಂಪನಿಗಳಾದ ನ್ಯೂ ಸ್ಪೇಸ್ ರಿಸರ್ಚ್ ಅಂಡ್ ಟೆಕ್ನೋಲಜಿಸ್ ಸತತ 24 ಗಂಟೆಗಳ ಕಾಲ ಹಾರಾಡಬಲ್ಲ ಸೋಲಾರ್ ವಿಮಾನವನ್ನು ಅಭಿವೃದ್ಧಿಪಡಿಸಿದೆ. ಇದು ಕೇವಲ ಗಡಿಯಲ್ಲಿ ನಿಗಾ, ಪರಿಸರ ಅಧ್ಯಯನ ಮುಂತಾದವುಗಳಿಗೆ ಮಾತ್ರ ಬಳಸಬಹುದಾಗಿದೆ.
ಅಮೆರಿಕದ ಅರಿಜೊನಾದಲ್ಲಿ ಏರ್ ಬಸ್ ಜೈಪರ್ ಸಂಸ್ಥೆ ಸತತ 64 ಗಂಟೆಗಳ ಕಾಲ ಹಾರಾಡುವ ವಿಮಾನ ಅಭಿವೃದ್ಧಿಪಡಿಸಿದೆ. ಅಮೆರಿಕ ಅಲ್ಲದೇ ಬ್ರಿಟನ್, ನ್ಯೂಜಿಲೆಂಡ್, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ಈ ರೀತಿಯ ವಿಮಾನ ಅಭಿವೃದ್ಧಿಗೆ ಸಂಶೋಧನೆ ನಡೆಸಿವೆ.