ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೂ ವಿಸ್ತರಿಸಿದ `ವಾತ್ಸಲ್ಯ’ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಚಾಲನೆ ನೀಡಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಎನ್ ಪಿಎಸ್ ವಾತ್ಸಲ್ಯ ಯೋಜನೆಗೆ ನಿರ್ಮಲಾ ಸೀತರಾಮನ್ ಚಾಲನೆ ನೀಡಿದರು. ಪೋಷಕರು ತಮ್ಮ ಮಕ್ಕಳ ಭವಿಷ್ಯದಲ್ಲಿ ನೆರವಾಗಲು ಹಣ ಉಳಿಸುವ ಯೋಜನೆ ಇದಾಗಿದೆ.
ಪೋಷಕರು ಆನ್‌ಲೈನ್ ಮೂಲಕ ಎನ್‌ಪಿಎಸ್ ವಾತ್ಸಲ್ಯ ಯೋಜನೆಯ ಚಂದಾದಾರರಾಗಬಹುದು. ಕನಿಷ್ಠ 1000 ರೂ. ಕೊಡುಗೆ ಮೂಲಕ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ವಾತ್ಸಲ್ಯ ಖಾತೆ ತೆರೆಯಬಹುದಾಗಿದೆ. ಚಾಂದದಾರರಾದ ನಂತರ ವಾರ್ಷಿಕ 1000 ರೂ. ದೇಣಿಗೆ ಪಾವತಿಸುತ್ತಾ ಸಾಗಬಹುದು.
ಎನ್ ಪಿಎಸ್ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಚಾಲನೆ ನೀಡಿ ಹಣ ಪಾವತಿ ಹಾಗೂ ಖಾತೆ ತೆರೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಎನ್ ಪಿಎಸ್ ಖಾತೆಯಿಂದ ಹಣ ವಾಪಸ್ ಪಡೆಯುವ ಮಾರ್ಗಸೂಚಿ ಇನ್ನೂ ಅಂತಿಮಗೊಳಿಸಲಾಗಿಲ್ಲ.
ಎನ್‌ಪಿಎಸ್ ಯೋಜನೆ ಅತ್ಯಂತ ಸ್ಪರ್ಧಾತ್ಮಕ ಆದಾಯ ತಂದುಕೊಡುತ್ತದೆ. ಅಲ್ಲದೇ ಮಕ್ಕಳ ಭವಿಷ್ಯದ ಆದಾಯವನ್ನು ಖಾತ್ರಿಪಡಿಸುತ್ತದೆ. ಪೋಷಕರು ಉಳಿತಾಯ ಮಾಡಿದ ಮಕ್ಕಳ ಭವಿಷ್ಯವನ್ನು ರಕ್ಷಿಸುತ್ತದೆ ಎಂದು ವಾತ್ಸಲ್ಯ ಯೋಜನೆ ಉದ್ಘಾಟಿಸಿದ ನಂತರ ನಿರ್ಮಲಾ ಸೀತರಾಮನ್ ಹೇಳಿದರು.
ಎನ್ ಪಿಎಸ್ ವಾತ್ಸಲ್ಯ ಯೋಜನೆ ಈಗಾಗಲೇ ಅಸ್ತಿತ್ವದಲ್ಲಿರುವ ಎನ್ ಪಿಎಸ್ ನಿಂದ ಮಕ್ಕಳಿಗೆ ವಿಸ್ತರಿಸಲಾಗಿದೆ. ಕಳೆದ 10 ವರ್ಷಗಳಲ್ಲಿ, ಎಬ್ ಪಿಎಸ್ 13 ಲಕ್ಷ ರೂ. ಕೋಟಿ ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್ (AUM) ಜೊತೆಗೆ 1.86 ಕೋಟಿ ಚಂದಾದಾರರನ್ನು ಹೊಂದಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎನ್ ಪಿಎಸ್ ವಾತ್ಸಲ್ಯ ಖಾತೆಯನ್ನು ತೆರೆಯಬಹುದು. 18 ವರ್ಷ ಪೂರ್ಣಗೊಂಡ ನಂತರ ಸ್ವಯಂಚಾಲಿತವಾಗಿ ಸಾಮಾನ್ಯ ಎನ್ ಪಿಎಸ್ ಖಾತೆಗೆ ಪರಿವರ್ತನೆ ಆಗುತ್ತದೆ. 60 ವರ್ಷ ವಯಸ್ಸಾದ ನಂತರ ಪಿಂಚಣಿಯಾಗಿ ಮಾಸಿಕವಾಗಿ ಖಾತೆಗೆ ಜಮಾವಣೆ ಆಗಲಿದೆ.
ಎನ್‌ಪಿಎಸ್ ಈಕ್ವಿಟಿ, ಕಾರ್ಪೊರೇಟ್ ಸಾಲ ಮತ್ತು ಜಿ-ಸೆಕ್ ಗಳಲ್ಲಿನ ಹೂಡಿಕೆಗಳಿಗೆ ಕ್ರಮವಾಗಿ ಮಾಸಿಕ ಶೇ.14, ಶೇ.9.1 ಮತ್ತು ಶೇ.8.8ರಷ್ಟು ಆದಾಯ ಬರಲಿದೆ ಎಂದು ಅವರು ಹೇಳಿದರು.
ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಎನ್ ಪಿಎಸ್ ವಾತ್ಸಲ್ಯ ಯೋಜನೆಯನ್ನು ಪ್ರಕಟಿಸಲಾಗಿದ್ದು, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಅನೇಕ ಸಾಲಗಾರರು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) – ವಾತ್ಸಲ್ಯವನ್ನು ಪ್ರಾರಂಭಿಸಲು ಪಿಎಫ್‌ಆರ್‌ಡಿಎ ಜೊತೆ ಕೈಜೋಡಿಸಿದ್ದಾರೆ.