ಜಗದ್ಗುರು ಶಂಕರಚಾರ್ಯರ ಗೋ ಸಂರಕ್ಷಣಾ ಯಾತ್ರೆಗೆ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಮೇಘಾಲಯದಲ್ಲಿ ಯಾತ್ರೆ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.
ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರನಾಂದ್ ಸರಸ್ವತಿ ಮಹರಾಜ್ ನೇತೃತ್ವದಲ್ಲಿ ಆರಂಭಿಸಲಾಗಿರುವ `ಗೋ ಧ್ವಜ್ ಸ್ಥಾಪನಾ ಭಾರತ್ ಯಾತ್ರೆ’ ಮೇಘಾಲಯ ಪ್ರವೇಶಿಸುವ ಸಾಧ್ಯತೆ ಇದೆ.
ಗೋವುಗಳನ್ನು ಕಸಾಯಿಖಾನೆಗೆ ಹಾಕುವುದಕ್ಕೆ ಕಡಿವಾಣ ಹಾಕಲು ಶಂಕರಾಚಾರ್ಯರು ನಡೆಸುತ್ತಿರುವ ಗೋವು ರಕ್ಷಣಾ ಯಾತ್ರೆಗೆ ಈಗಾಗಲೇ ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಗಳಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಇದೀಗ ಮೇಘಾಲಯ ಪ್ರವೇಶಿಸದಂತೆ ಪ್ರತಿಭಟನಾಕಾರರು ತಡೆಯುವ ಸಾಧ್ಯತೆ ಇದೆ.
ಈಶಾನ್ಯ ರಾಜ್ಯಗಳಲ್ಲಿ ಗೋವುಗಳು ಆಹಾರ ಪದ್ಧತಿ ಆಗಿದೆ. ನಮಗೆ ಯಾವ ಆಹಾರ ಸೇವಿಸಬೇಕು ಯಾವುದೇ ಬೇಡ ಅಂತ ಹೇಳುವ ಅಧಿಕಾರ ಯಾರಿಗೂ ಇಲ್ಲ. ಆಹಾರ ಪದ್ಧತಿ ಮೇಲೆ ಹೇರಿಕೆ ಮಾಡುವ ಯಾವುದೇ ಪ್ರಯತ್ನಗಳನ್ನು ವಿರೋಧಿಸುತ್ತೇವೆ ಎಂದು ಸ್ಥಳೀಯ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಶಂಕರಾಚಾರ್ಯರು ವಿಶೇಷ ವಿಮಾನದ ಮೂಲಕ ಶಿಲ್ಲಾಂಗ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಅವರಿಗೆ ಸಹಕರಿಸುವಂತೆ ಸ್ಥಳೀಯ ಸರ್ಕಾರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಇದಕ್ಕೂ ಮೊದಲು ಶಂಕರಾಚಾರ್ಯರು ಹಾಗೂ ಉತ್ತರಾಖಂಡ್ ನ ಜ್ಯೋತಿರ್ಮಠ ಪೀಠದ ಶ್ರೀಗಳಿದ್ದ ವಿಮಾನ ಗುರುವಾರ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದರೂ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಬರಲು ಆಗದೇ ವಾಪಸ್ಸಾಗಿದ್ದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂದು ಅಧಿಕಾರಿಗಳೇ ವಾಪಸ್ ಕಳುಹಿಸಿದ್ದರು.