ಗಾಯಗೊಂಡಿದ್ದ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಸೂಜಿಯನ್ನು ತಲೆಯೊಳಗೆ ಮರೆತುಬಿಟ್ಟ ಘಟನೆ ಉತ್ತರ ಪ್ರದೇಶದ ಹಾಪುರ್ ನಲ್ಲಿ ನಡೆದಿದೆ.
ಅಕ್ಕಪಕ್ಕದ ಮನೆಯವರ ನಡುವೆ ನಡೆದ ಜಗಳದಲ್ಲಿ ಸೀತಾರ ಎಂಬ 19 ವರ್ಷದ ಯುವತಿಯ ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು.
ಗಾಯಗೊಂಡ ಯುವತಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆಳವಾದ ಗಾಯವಾಗಿದ್ದರಿಂದ ತಲೆಗೆ ಹೊಲಿಗೆ ಹಾಕಿ ಬ್ಯಾಂಡೇಜ್ ಸುತ್ತಿದ ವೈದ್ಯರು ಮನೆಗೆ ವಾಪಸ್ ಕಳುಹಿಸಿದರು.
ಮನೆಗೆ ಹಿಂತಿರುಗಿದ ಕೆಲವೇ ಸಮಯದ ನಂತರ ಯುವತಿ ನೋವಿನಿಂದ ಕಿರುಚಾಡಲು ಆರಂಭಿಸಿದಳು. ಕೂಡಲೇ ಆಕೆಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿದ್ದ ವೈದ್ಯರು ಗಾಯವನ್ನು ಮತ್ತೆ ತೆರೆದು ನೋಡಿದಾಗ ಒಳಗಿದ್ದ ಸೂಜಿಯನ್ನು ಕಂಡು ಬೆಚ್ಚಿಬಿದ್ದರು.
ವೈದ್ಯರು ಮತ್ತೆ ಚಿಕಿತ್ಸೆ ಮಾಡಿ ತಲೆಯೊಳಗೆ ಇದ್ದ ಸೂಜಿಯನ್ನು ತೆಗೆದರು. ಇದರಿಂದ ಯುವತಿ ನಿರಾಳವಾದಳು.
ಮಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಪಾನಮತ್ತರಾಗಿದ್ದರು ಎಂದು ತಾಯಿ ಸಮುದಾಯ ಕೇಂದ್ರದ ವೈದ್ಯರ ವಿರುದ್ಧ ಆರೋಪಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹಿರಿಯ ವೈದ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಎಡವಟ್ಟು ಬಗ್ಗೆ ನಮಗೆ ತಿಳಿದಿದೆ. ದ್ವಿಸದಸ್ಯ ತಂಡದಿಂದ ತನಿಖೆಗೆ ಆದೇಶಿಸಿದ್ದೇವೆ, ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಾಪುರ್ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾ ಸುನಿಲ್ ತ್ಯಾಗಿ ತಿಳಿಸಿದ್ದಾರೆ.