ಶೀಘ್ರದಲ್ಲೇ ಬೆಂಗಳೂರು- ತುಮಕೂರು ಮತ್ತು ಬೆಂಗಳೂರು- ಮೈಸೂರು ನಡುವೆ ನಮೋ ಭಾರತ್ ರ್ಯಾಪಿಡ್ ರೈಲು ಸಂಚಾರ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಭವ್ ತಿಳಿಸಿದ್ದಾರೆ.
ಬೆಂಗಳೂರಿಗೆ ಶನಿವಾರ ಭೇಟಿ ನೀಡಿದ್ದ ಸಚಿವರು ಕಂಟೋನ್ಮೆಂಟ್ ನಲ್ಲಿ ರೈಲ್ವೆ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಹಾಗೂ ಸಮೀಪದ ನಗರಗಳ ನಡುವೆ ಸಂಚರಿಸಲು ಶೀಘ್ರದಲ್ಲೇ ನಮೋ ಭಾರತ್ ರ್ಯಾಪಿಡ್ ರೈಲು ಒದಗಿಸಲಾಗುವುದು ಎಂದರು.
ಇತ್ತೀಚೆಗಷ್ಟೇ ಆರಂಭಿಸಲಾದ ನಮೋ ಭಾರತ್ ರಾಪಿಡ್ ರೈಲು ಬೆಂಗಳೂರು- ಮೈಸೂರು ನಡುವೆ ನಮೋ ಭಾರತ್ ರ್ಯಾಪಿಡ್ ರೈಲು ಸಂಚರಿಸುತ್ತಿದೆ. ಶ್ರೀಘ್ರದಲ್ಲೇ ಬೆಂಗಳೂರು ಟು ತುಮಕೂರಿಗೆ ಈ ರೈಲು ಆರಂಭಿಸುತ್ತೇವೆ. ಬೆಂಗಳೂರು ನಗರಕ್ಕೆ 200 ಕಿಲೋ ಮೀಟರ್ ದೂರದಲ್ಲಿರುವ ಪ್ರಮುಖ ನಗರಗಳಿಗೆ ನಮೋ ಭಾರತ್ ರ್ಯಾಪಿಡ್ ರೈಲು ಆರಂಭಿಸುವ ಕುರಿತು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಕುರಿತು ಮಾತನಾಡಿದ ರೈಲ್ವೆ ಸಚಿವರು, ಎರಡೂ ಕಾರಿಡಾರ್‌ಗಳು ಅತ್ಯಂತ ವೇಗವಾಗಿ ಮುಕ್ತಾಯಗೊಳ್ಳಲಿವೆ. ಬಿಎಸ್‌ಆರ್‌ಪಿ ಮತ್ತು ಮೆಟ್ರೋ ರೈಲು ಆಯ್ಕೆಗಳು ಶೀಘ್ರದಲ್ಲೇ ಪ್ರಯಾಣಿಕರಿಗೆ ಮುಂದೆ ಬರಲಿದ್ದು, ಸಂಚಾರ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು.
ಬೆಂಗಳೂರಿನ ರೈಲ್ವೆ ಸಾರಿಗೆ ಸಾರಿಗೆ ವ್ಯವಸ್ಥೆ ಬಗ್ಗೆ ವಿವರವಾಗಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, 3 ದೊಡ್ಡ ಯೋಜನೆಗಳ ಪರಿಶೀಲನೆ ಕಾರ್ಯ ನಡೆದಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಸರ್ಕ್ಯುಲರ್ ರೈಲಿನ ಕುರಿತು ಡಿಪಿಆರ್‌ನ ಪ್ರಗತಿ ಉತ್ತಮವಾಗಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ತನಕದ ಕಾಮಗಾರಿ ಪರಿಶೀಲಿಸಿದ್ದು ತೃಪ್ತಿ ನೀಡಿದೆ ಎಂದರು.
ರೈಲ್ವೆ ನಿಲ್ದಾಣವನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಾಧ್ಯವಾದಷ್ಟು ಸಮೀಪದಲ್ಲಿ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ವಿಮಾನ ನಿಲ್ದಾಣದಿಂದ ಯಲಹಂಕ ರೈಲು ನಿಲ್ದಾಣದವರೆಗಿನ ಮಾರ್ಗವನ್ನು ದ್ವಿಗುಣಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ರೈಲ್ವೆಯು ಶೀಘ್ರದಲ್ಲೇ ಅಮೃತ್ ಭಾರತ್ ರೈಲುಗಳ ಆವೃತ್ತಿ 2.0ರ ದೊಡ್ಡ ಪ್ರಮಾಣದ ಉತ್ಪಾದನೆಯನ್ನು ಸುಧಾರಣೆಗಳೊಂದಿಗೆ ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.
ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 18 ಸಾವಿರ ಚದರ ಅಡಿ ಮೀಟರ್ ಅಗಲೀಕರಣ ಕಾಮಗಾರಿ ಮುಗಿದಿದೆ. ಅಂಡರ್ ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿ ನಡೆಯುತ್ತಿದ್ದು, ಡಿಸೆಂಬರ್ ಕೊನೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.