ಓಲಾ ಎಲೆಕ್ಟ್ರಿಕ್ ವಾಹನದಲ್ಲಿ ದೋಷಗಳ ಬಗ್ಗೆ ಸಾವಿರಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಯ ಕಳಪೆ ಎಲೆಕ್ಟ್ರಿಕ್ ವಾಹನದ ಸೇವೆಗಳ ಕುರಿತು 10,644ಕ್ಕೂ ಹೆಚ್ಚು ಗ್ರಾಹಕರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ದಾರಿ ತಪ್ಪಿಸುವ ಜಾಹಿರಾತು, ಕಳಪೆ ಸೇವೆ, ಅಕ್ರಮ ವ್ಯವಹಾರ ಮತ್ತು ಗ್ರಾಹಕ ಹಕ್ಕುಗಳ ನಿಯಮಗಳ ಉಲ್ಲಂಘನೆ ಸೇರಿದಂತೆ ಹಲವು ಗ್ರಾಹಕರ ಸುರಕ್ಷತಾ ನಿಯಮ 2019ವನ್ನು ಹಲವು ಬಾರಿ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
2023 ಸೆಪ್ಟೆಂಬರ್ 1ರಿಂದ 2024 ಆಗಸ್ಟ್ 30ರ ಅವಧಿಯಲ್ಲಿ ಓಲಾ ಇ ಸ್ಕೂಟರ್ ಸಂಬಂಧಿಸಿ 10,644 ದೂರುಗಳು ಓಲಾ ಕಂಪನಿ ವಿರುದ್ಧ ದಾಖಲಾಗಿವೆ. 3389 ದೂರುಗಳು ಸೇವೆಯಲ್ಲಿ ವಿಳಂಬ, 1899 ದೂರುಗಳು ತಡವಾಗಿ ವಾಹನ ವಿಲೇವಾರಿ, 1459 ದೂರುಗಳು ಭರವಸೆ ನೀಡಿದಂತೆ ಸೇವೆ ನೀಡದೇ ಇರುವುದು ಆಗಿವೆ.
ಓಲಾ ಕಂಪನಿಯ ಓಲಾ ಇ-ಸ್ಕೂಟರ್ ವಿರುದ್ಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಶೇ.8ರಷ್ಟು ಕುಸಿತ ಕಂಡಿವೆ. ಅಲ್ಲದೇ ಕಳೆದ ಕೆಲವು ದಿನಗಳಿಂದ ಸತತವಾಗಿ ಷೇರು ಮಾರುಕಟ್ಟೆಯಲ್ಲಿ ಷೇರು ದರ ಕುಸಿತದಿಂದ ಓಲಾ ಕಂಪನಿ ಸಾಕಷ್ಟು ನಷ್ಟ ಅನುಭವಿಸಿದೆ.