ಆಸ್ತಿಗಾಗಿ ಮಕ್ಕಳ ಕಾಟ ತಡೆಯದೇ 70 ವರ್ಷದ ವೃದ್ಧ ಹಾಗೂ ಅವರ ಪತ್ನಿ ಮನೆಯ ವಾಟರ್ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
70 ವರ್ಷದ ಹಜಾರಿರಾಮ್ ಬಿಶ್ನೋಯಿ ಹಾಗೂ 68 ವರ್ಷದ ಪತ್ನಿ ಚಾವ್ಲಿ ದೇವಿ ರಾಜಸ್ಥಾನ್ ನ ನಾಗೌರ್ ನ ಕಾರ್ನಿ ಕಾಲೋನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ವೃದ್ಧರ ಶವಗಳನ್ನು ಮನೆಯ ವಾಟರ್ ಟ್ಯಾಂಕ್ ನಿಂದ ಹೊರತೆಗೆಯಲಾಗಿದೆ.
ದಂಪತಿ ಆತ್ಮಹತ್ಯೆಗೆ ಮುನ್ನ ಎರಡು ಪುಟಗಳ ಡೆತ್ ನೋಟ್ ಬರೆದು ಗೋಡೆಯ ಮೇಲೆ ಅಂಟಿಸಿದ್ದಾರೆ. ಪುತ್ರ ರಾಜೇಂದ್ರ ಮೂರು ಬಾರಿ ಹಾಗೂ ಮತ್ತೊಬ್ಬ ಪುತ್ರ ಸುನೀಲ್ ಎರಡು ಬಾರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ಹೆತ್ತಮಕ್ಕಳು ಮಾತ್ರವಲ್ಲ ಸೊಸೆಯರು ಕೂಡ ಕಾರಣ. ತಾವು ಸಂಪಾದಿಸಿದ ಆಸ್ತಿಯನ್ನು ಕಬಳಿಸಿರುವ ಇವರು, ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಊಟ ಕೊಡದೇ ಹಿಯಾಳಿಸುತ್ತಿದ್ದು, ಊಟ ಬೇಕಾದರೆ ತಟ್ಟೆ ಹಿಡಿದು ಭಿಕ್ಷೆ ಬೇಡಲು ಹೋಗಿ ಎಂದು ನಿಂದಿಸಿದ್ದಾರೆ ಎಂದು ಆತ್ಮಹತ್ಯೆಗೆ ಮುನ್ನ ವೃದ್ಧ ದಂಪತಿ ಗೋಡೆ ಮೇಲೆ ಡೆತ್ ನೋಟ್ ಬರೆದಿದ್ದಾರೆ.
ವೃದ್ಧ ದಂಪತಿಗೆ ಇಬ್ಬರು ಗಂಡು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ. ಮಕ್ಕಳು ಹಲ್ಲೆ ಮಾಡಿದರೆ ಈ ವಿಷಯ ಬಹಿರಂಗಪಡಿಸಬೇಡಿ. ಪೊಲೀಸರ ಬಳಿ ಹೋದರೆ ಕೊಲ್ಲುವುದಾಗಿ ಸೊಸೆಯರು ಬೆದರಿಕೆ ಹಾಕಿದ್ದಾರೆ ಎಂದು ಡೆತ್ ನೋಟ್ ನಲ್ಲಿ ವಿವರಿಸಲಾಗಿದೆ.
ಮಕ್ಕಳು ಈಗಾಗಲೇ ಹೆತ್ತವರನ್ನೇ ವಂಚಿಸಿ ಮೂರು ಮನೆ ಹಾಗೂ ಕಾರನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಈ ವಿಷಯ ಗೊತ್ತಾದ ನಂತರ ಹೆತ್ತವರು ಪ್ರಶ್ನಿಸಿದ್ದಾರೆ. ಹೆತ್ತವರಿಂದ ಆಸ್ತಿ ಕಬಳಿಸಿದ ಮಕ್ಕಳು ಕನಿಷ್ಠ ಊಟ ಕೂಡದೇ ಹಿಯಾಳಿಸಿದ್ದಾರೆ.
ಎರಡನೇ ಪುತ್ರ ಸುನೀಲ್ ನಾವು ನಿಮಗೆ ಊಟ ಹಾಕಲ್ಲ. ಬೇಕಾದರೆ ತಟ್ಟೆ ಹಿಡಿದು ಭಿಕ್ಷೆ ಬೇಡಿಕೊಂಡು ತಿನ್ನಿ. ಹೊರಗೆ ಈ ವಿಷಯ ಬಾಯಿಬಿಟ್ಟರೆ ಕೊಲೆ ಮಾಡುತ್ತೇನೆ ಎಂದು ಹೆತ್ತ ತಂದೆ-ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಮನೆಯಲ್ಲಿ ಯಾರೂ ಕಾಣಿಸುತ್ತಿಲ್ಲ ಎಂದು ನೆರೆಮನೆಯವರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ವಾಟರ್ ಟ್ಯಾಂಕ್ ನಲ್ಲಿ ವೃದ್ಧ ದಂಪತಿಗಳ ಶವ ಪತ್ತೆಯಾಗಿದೆ. ಗೋಡೆಯ ಮೇಲೆ ಅಂಟಿಸಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ.
ಪ್ರಕರಣದಲ್ಲಿ ಮಕ್ಕಳು ಅಥವಾ ಸೊಸೆಯರನ್ನು ಬಂಧಿಸಲಾಗಿಲ್ಲ. ವಿಚಾರಣೆ ವೇಳೆ ಹೆತ್ತವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಅಫಿದಾವಿತ್ ಸಲ್ಲಿಸಿದ್ದಾನೆ.