ಸಗಣಿ ಬಾಚುವುದು ಹಾಗೂ ದನದ ಕೊಟ್ಟಿಗೆಯಲ್ಲಿ ಮಲಗಿದರೆ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಬಹುದು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಕ್ಯಾನ್ಸರ್ ರೋಗಿಗಳಿಂದ ಗೋಶಾಲೆ ಅಥವಾ ದನದ ಕೊಟ್ಟಿಗೆಯಲ್ಲಿ ಮಲಗಿಸಬೇಕು. ಮತ್ತು ಸಗಣಿ ಬಾಚುವ ಕೆಲಸ ಮಾಡಿಸಬೇಕು. ಹೀಗೆ ಮಾಡಿದರೆ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರನ್ನಾಗಿ ಮಾಡಬಹುದು. ಅಲ್ಲದೇ ಇದರಿಂದ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ಶೇ.50ರಷ್ಟು ಗುಣಮುಖರಾಗಬಹುದು ಎಂದು ಅವರು ಹೇಳಿದ್ದಾರೆ.
ಪಿಲಿಬಿಟ್ ನಲ್ಲಿ ಪಕಾಡಿಯಾ ನಾಗೌನ್ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಗೋಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಜನ್ಮದಿನವನನ್ನು ಗೋಶಾಲೆಗಳಲ್ಲಿ ಆಚರಿಸುವಂತೆ ಕರೆ ನೀಡಿದರು.
ಕಬ್ಬು ಅಭಿವೃದ್ಧಿ ಸಚಿವರಾಗಿರುವ ಸಂಜಯ್ ಸಿಂಗ್ ಗಂಗ್ವಾರ್, ಒಂದು ವೇಳೆ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿ, ಗೋಶಾಲೆಯಲ್ಲಿ ಒಂದು ಹಸುವನ್ನು ದತ್ತು ತೆಗೆದುಕೊಂಡು ಅದರ ಜೊತೆ ಕೆಲವು ದಿನ ಇರಬೇಕು. ಆಗ ರಕ್ತದೊತ್ತಡಕ್ಕೆ 20 ಎಂಜಿ ಮಾತ್ರೆ ತೆಗೆದುಕೊಳ್ಳುತ್ತಿದ್ದವರು 10 ದಿನದ ನಂತರ 10 ಜಿಎಂ ಮಾತ್ರೆ ಪಡೆಯುವಂತೆ ಆಗುತ್ತದೆ ಎಂದು ಅವರು ಹೇಳಿದರು.
ಹಸುವಿನಿಂದ ಮಾಡಿದ ಯಾವುದೇ ಉತ್ಪನ್ನ ಆರೋಗ್ಯಕ್ಕೆ ಉಪಕಾರಿ. ಗೋಶಾಲೆಯಲ್ಲಿ ಇದ್ದು ಹಸು ಜೊತೆ ಇದ್ದರೆ ಕ್ಯಾನ್ಸರ್ ಗುಣ ಆಗುತ್ತದೆ. ಸಗಣಿ ಇದ್ದರೆ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.