ಕೇರಳದ ವಯನಾಡು ಸೇರಿದಂತೆ ದೇಶಾದ್ಯಂತ 2 ಲೋಕಸಭೆ ಮತ್ತು 47 ವಿಧಾನಸಭೆ ಸ್ಥಾನಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ ಸಮಯದಲ್ಲೇ ದೇಶದ ಎಲ್ಲಾ ಸ್ಥಾನಗಳ ಉಪ ಚುನಾವಣೆ ದಿನಾಂಕವನ್ನು ಘೋಷಿಸಿದರು.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರಿಂದ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಕೇರಳದ ವಯನಾಡು ಕ್ಷೇತ್ರವನ್ನು ಸೋದರಿ ಪ್ರಿಯಾಂಕಾ ವಾದ್ರಾಗೆ ಬಿಟ್ಟುಕೊಟ್ಟಿದ್ದರು. ಇದೀಗ ವಯನಾಡು ಕ್ಷೇತ್ರ ಪ್ರಿಯಾಂಕ ಅವರ ಅಧಿಕೃತ ರಾಜಕೀಯ ಪ್ರವೇಶದ ಕ್ಷೇತ್ರವಾಗಲಿದ್ದು, ಈ ಕ್ಷೇತ್ರದ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ.
ವಯನಾಡು ಅಲ್ಲದೇ ಮಹಾರಾಷ್ಟ್ರದ ನಾನಾದ್ ಕ್ಷೇತ್ರದ ಲೋಕಸಭಾ ಸ್ಥಾನಕ್ಕೂ ಉಪಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಸೇರಿದಂತೆ ಎಲ್ಲಾ ಉಪ ಚುನಾವಣೆಯ ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ.
ಉತ್ತರ ಪ್ರದೇಶದ 9, ರಾಜಸ್ಥಾನ್ ನ 7, ಪಶ್ಚಿಮ ಬಂಗಾಳದ 6, ಅಸ್ಸಾಂನ 5, ಬಿಹಾರದ 4, ಕರ್ನಾಟಕದ 3, ಮಧ್ಯಪ್ರದೇಶ ಮತ್ತು ಸಿಕ್ಕಿಂನ ತಲಾ 2, ಛತ್ತೀಸಗಢ, ಮೇಘಾಲಯ, ಉತ್ತರಾಖಂಡ್ ನ ತಲಾ 1 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.