ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಮಾಡುವ ಎಡವಟ್ಟುಗಳು ಆಗೊಮ್ಮೆ ಈಗೊಮ್ಮೆ ವರದಿ ಆಗುತ್ತಲೇ ಇರುತ್ತವೆ. ಇದರಿಂದ ರೋಗಿಗಳು ತೊಂದರೆ ಒಳಗಾಗಿರುವುದು ಪದೇಪದೆ ವರದಿ ಆಗುತ್ತಿವೆ. ಆದರೆ ಇಲ್ಲೊಬ್ಬರು ವೈದ್ಯರು ಮಾಡಿದ ಎಡವಟ್ಟಿನಿಂದ ಒಂದಲ್ಲ, ಎರಡರಲ್ಲ 12 ವರ್ಷ ನರಳಿದ್ದಾರೆ.
ಹೌದು, ಈಶಾನ್ಯ ರಾಜ್ಯವಾದ ಸಿಕ್ಕಿಂನಲ್ಲಿ ಈ ಘಟನೆ ನಡೆದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಒಂದಲ್ಲ ಎರಡು ಕತ್ತರಿಗಳನ್ನು ಮರೆತಿದ್ದಾರೆ. ಇದು 12 ವರ್ಷಗಳ ನಂತರ ಕೊನೆಗೂ ಪತ್ತೆ ಹಚ್ಚಲಾಗಿದೆ.
45 ವರ್ಷದ ಮಹಿಳೆ 12 ವರ್ಷಗಳ ಹಿಂದೆ ಕರುಳಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಒಂದಲ್ಲ, ಎರಡು ಕತ್ತರಿಗಳನ್ನು ಬಿಟ್ಟಿದ್ದಾರೆ.
2012ರಲ್ಲಿ ಗ್ಯಾಂಗ್ ಟಾಕ್‌ನ ಸರ್ ಥುಟೋಬ್ ನಾಂಗ್ಯಾಲ್ ಸ್ಮಾರಕ (ಎಸ್‌ಟಿಎನ್‌ಎಂ) ಆಸ್ಪತ್ರೆಯಲ್ಲಿ ಮಹಿಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಲೇ ಇತ್ತು. ಹಲವಾರು ವೈದ್ಯರನ್ನು ಭೇಟಿ ಮಾಡಿ ಸಮಸ್ಯೆ ಹೇಳಿದರೆ ಯಾರೂ ಸಮಸ್ಯೆ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ನೋವು ನಿವಾರಕ ಮಾತ್ರೆ ಕೊಟ್ಟು ಕಳುಹಿಸುತ್ತಿದ್ದರು ಎಂದು ಪತಿ ಹೇಳಿದ್ದಾರೆ.
ಅಕ್ಟೋಬರ್ 8 ರಂದು, ಇದೇ ಎಸ್ ಟಿಎನ್ ಎಂ ಆಸ್ಪತ್ರೆಗೆ ಹೋದಾಗ ವೈದ್ಯರು ಎಕ್ಸ್ ರೇ ಮಾಡಲು ಹೇಳಿದರು. ಎಕ್ಸ್ ರೇನಲ್ಲಿ ಪತ್ನಿಯ ಹೊಟ್ಟೆಯಲ್ಲಿ ಕತ್ತರಿಗಳು ಕಂಡು ಬಂದವು. ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ ಕತ್ತರಿಗಳನ್ನು ಹೊರತೆಗೆದಿದ್ದಾರೆ ಎಂದು ಪತಿ ಘಟನೆಯನ್ನು ವಿವರಿಸಿದ್ದಾರೆ.
ಪ್ರಸ್ತುತ ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಸುದ್ದಿ ಹರಡುತ್ತಿದ್ದಂತೆ ಆಸ್ಪತ್ರೆ ಮತ್ತು ವೈದ್ಯಕೀಯ ಅಧಿಕಾರಿಗಳಿಂದ ಆಕ್ರೋಶ ವ್ಯಕ್ತವಾಗಿದೆ.