1960ರ ದಶಕದ ಅತ್ಯಂತ ಜನಪ್ರಿಯ ಧಾರವಾಹಿ ಆಗಿದ್ದ `ಟಾರ್ಜನ್’ ಖ್ಯಾತಿಯ ಅಮೆರಿಕದ ನಟ ರಾನ್ ಎಲೈ ನಿಧನರಾಗಿದ್ದು, ಅವರಿಗೆ 86 ವರ್ಷ ವಯಸ್ಸಾಗಿತ್ತು.
ರಾನ್ ಎಲೈ ಪುತ್ರಿ ಕ್ರಿಸ್ಟನ್ ಕ್ಯಾಸ್ಲೆ ಅಕ್ಟೋಬರ್ 23ರಂದು ಇನ್ ಸ್ಟಾಗ್ರಾಂ ನಲ್ಲಿ ಸುದೀರ್ಘ ಭಾವನಾತ್ಮಕ ಪತ್ರದ ಮೂಲಕ ತಂದೆಯ ನಿಧನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಜಗತ್ತು ಕಂಡ ಅತ್ಯಧ್ಬುತ ವ್ಯಕ್ತಿ ಹಾಗೂ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ ಎಂದು ಕ್ರಿಸ್ಟನ್ ಕ್ಯಾಸ್ಲೆ ಪೋಸ್ಟ್ ಮಾಡಿದ್ದಾರೆ.
1966ರಿಂದ 1968ರವರೆಗೆ ಎನ್ ಬಿಸಿ ಟೆಲಿವಿಷನ್ ನೆಟ್ ವರ್ಕ್ ಚಾನೆಲ್ ನಲ್ಲಿ ಟಾರ್ಜನ್ ಧಾರವಾಹಿ ಪ್ರಸಾರವಾಗಿತ್ತು. ಚಿತ್ರೀಕರಣದ ವೇಳೆ ರಾನ್ ಎಲೈ ಹಲವಾರು ಬಾರಿ ಗಾಯಗೊಂಡಿದ್ದರು. ಸ್ವತಃ ತಾವೇ ಸಾಹಸ ಮಾಡುತ್ತಿದ್ದ ರಾನ್ ಮೂಳೆ ಮುರಿತ, ಕಾಡುಪ್ರಾಣಿಗಳ ದಾಳಿ ಸೇರಿದಂತೆ ಹಲವಾರು ಬಾರಿ ಗಾಯಗೊಂಡಿದ್ದರು.
2001ರಲ್ಲಿ ನಟನಾ ವೃತ್ತಿಗೆ ವಿದಾಯ ಹೇಳಿದ ರಾನ್, ಕಾದಂಬರಿಕಾರನಾಗಿ ಗುರುತಿಸಿಕೊಂಡಿದ್ದು, ನಿಗೂಢ ಕತೆಗಳನ್ನೊಳಗೊಂಡ 2 ಕಾದಂಬರಿ ಬರೆದಿದ್ದರು. ಆದರೆ 2014ರಲ್ಲಿ ಮತ್ತೆ ಅಮಿಷ್ ಚಿತ್ರದಲ್ಲಿ ಮತ್ತೆ ನಟಿಸಿದ್ದರು.