ವಿವಿಧ ವಿಮಾನ ಸಂಸ್ಥೆಗಳಿಗೆ ಹೊಸದಾಗಿ 70 ಹುಸಿ ಬಾಂಬ್ ಸಂದೇಶಗಳು ಬಂದಿದ್ದರಿಂದ ಒಂದೇ ದಿನ 95 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿದ್ದು, ಹರಿಯಾಣ ಮೂಲದ ಯುವಕನನ್ನು ಬಂಧಿಸಿದ ನಂತರವೂ ಹುಸಿ ಬಾಂಬ್ ಬೆದರಿಕೆ ಕರೆಗಳು ನಿಲ್ಲುತ್ತಿಲ್ಲ.
ಕಳೆದ 11 ದಿನಗಳಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶಗಳಿಂದ 250ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ನೂರಾರು ಕೋಟಿ ರೂ. ನಷ್ಟ ಉಂಟಾಗಿದೆ.
ಗುರುವಾರ ಒಂದೇ ದಿನ ಸುಮಾರು 70 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ವಿಸ್ತಾರ, ಏರ್ ಇಂಡಿಯಾ, ಇಂಡಿಗೋ ಸೇರಿದಂತೆ ವಿವಿಧ ವಿಮಾನ ಸಂಸ್ಥೆಗಳಿಗೆ ತಲಾ 20 ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದರೂ ಹುಸಿ ಬಾಂಬ್ ಬೆದರಿಕೆಗಳ ಕಾಟ ನಿಲ್ಲುವಂತೆ ಕಾಣುತ್ತಿಲ್ಲ.