ಮಂಡ್ಯ ಜನರೇ ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರನ್ನು ರಾಮನಗರದಿಂದ ಓಡಿಸಿದ್ದಾರೆ. ಆದರೆ ಮಂಡ್ಯದವರೆಲ್ಲ ನರಸತ್ತವರು ಅಂತ ಇಲ್ಲಿಗೆ ಬಂದಿದ್ದಾರೆ. ಮಂಡ್ಯ ಜಿಲ್ಲೆಯ ಮುಖಂಡರು ಮತ್ತು ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು ಕರೆ ಕೊಡುತ್ತೇನೆ ಎಂದರು.
ಮಂಡ್ಯ ಜಿಲ್ಲೆಯ ಜನರೇ “ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ” ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ, ಕಾಂಗ್ರೆಸ್ ಸೇರಲು ನಿರ್ಧಾರ ಮಾಡಿದ್ದೇನೆ. ಸಿ.ಪಿ.ಯೋಗೇಶ್ವರ್ ರೀತಿ ನಾನು ಕೂಡ ಜಂಪಿಂಗ್ ಸ್ಟಾರ್. ಸಂಸದ ಡಾ. ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ಸಿಪಿ ಯೋಗೇಶ್ವರ್ ಶ್ರಮ ವಹಿಸಿದರು. ಆದರೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನೇ ಬಲಿ ಪಡೆದಿದ್ದಾರೆ. ಚನ್ನಪಟ್ಟಣ ಜನ ದಡ್ಡರಲ್ಲ, ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಪಟ್ಟಣದಲ್ಲಿ ನಿಖಿಲ್ ಅಲ್ಲ ಹೆಚ್ಡಿ ಕುಮಾರಸ್ವಾಮಿ ನಿಂತರೂ ಗೆಲ್ಲಲು ಆಗಲ್ಲ. ವಿಜಯೇಂದ್ರ, ಬಿಎಸ್ ಯಡಿಯೂರಪ್ಪ ಅವರಿಂದ ಸಿಪಿ ಯೋಗೇಶ್ವರ್ ಬಿಜೆಪಿ ತೊರೆದರು. ಈಗ ನಾನು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದೇನೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ? ಮಂಡ್ಯದಲ್ಲಿ ನಾಲ್ಕು ದಿನ, ಬೆಂಗಳೂರಿನಲ್ಲಿ ನಾಲ್ಕು ದಿನ ಇರುತ್ತಾರೆ. ಇದರ ಬದಲು, ದೇಶ ಸುತ್ತಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕಿತ್ತು. ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎಂದು ಅವರು ಹೇಳಿದರು.