ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಬರೋಬ್ಬರಿ 21 ಕೆಜಿ ತೂಕದ ಬೃಹತ್ ಗಾತ್ರದ ಕಾಟ್ಲಾ ಮೀನು ಮೀನುಗಾರರು ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ.
ಕೆರೆಯಲ್ಲಿ ಎಂದಿನಂತೆ ಮೀನುಗಾರಿಕೆಗೆ ತೆರಳಿದ್ದ ಗಂಡಬೊಮ್ಮನಹಳ್ಳಿಯ ಮೀನುಗಾರ ಚನ್ನಪ್ಪ (ಪುಟ್ಟಪ್ಪ) ಅವರ ಬಲೆಗೆ ಈ ಬೃಹತ್ ಗಾತ್ರದ ಕಾಟ್ಲಾ ಮೀನು ಸಿಕ್ಕಿದೆ. ಮೀನು ಬರೋಬ್ಬರಿ 21 ಕೆಜಿ ತೂಕವಿದ್ದು, ಕೆಜಿಗೆ ₹300ರಂತೆ ಒಟ್ಟು ₹6,000ಕ್ಕೆ ಮಾರಾಟವಾಗಿದೆ.
ಬೃಹತ್ ಗಾತ್ರದ ಮೀನು ಕೆರೆಯ ಬಂದರಿಗೆ ತಲುಪುತ್ತಿದ್ದಂತೆ ವಿಷಯ ತಿಳಿದ ಮೀನುಗಾರರು ಹಾಗೂ ಸ್ಥಳೀಯ ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿ ಮೀನನ್ನು ವೀಕ್ಷಿಸಿದರು. ಬೃಹತ್ ಕಾಟ್ಲಾ ಮೀನು ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದರು.
ಗಂಡಬೊಮ್ಮನಹಳ್ಳಿ ಕೆರೆಯ ಮೀನುಗೆ ಭಾರೀ ಬೇಡಿಕೆ
ಗಂಡಬೊಮ್ಮನಹಳ್ಳಿ ಕೆರೆಯ ಮೀನು ಎಂದರೆ ಸುತ್ತಮುತ್ತಲಿನ ತಾಲೂಕುಗಳಲ್ಲಿ ವಿಶೇಷ ಬೇಡಿಕೆಯಿದೆ. ರುಚಿ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ಈ ಕೆರೆಯ ಮೀನು ಖರೀದಿಸಲು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯದುರ್ಗ, ಮೊಳಕಾಲ್ಮೂರು ಸೇರಿದಂತೆ ವಿವಿಧ ಭಾಗಗಳಿಂದ ಗ್ರಾಹಕರು ಬರುತ್ತಾರೆ ಎನ್ನಲಾಗಿದೆ.
ಸ್ಥಳೀಯರ ಪ್ರಕಾರ, ಗಂಡಬೊಮ್ಮನಹಳ್ಳಿ ಕೆರೆಯ ಮೀನಿನ ರುಚಿ ಒಮ್ಮೆ ಸವಿದರೆ ಮತ್ತೆ ಇದೇ ಕೆರೆಯ ಮೀನು ಬೇಕೆನಿಸುತ್ತದೆ ಎಂಬಷ್ಟು ಜನಪ್ರಿಯತೆ ಹೊಂದಿದೆ.
ಮೀನುಗಾರರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲಿ
ಈ ಕುರಿತು ಮೀನುಗಾರ ಚನ್ನಪ್ಪ ಮಾತನಾಡಿ, “ಕೆರೆಯಲ್ಲಿ ಮೀನು ಹಿಡಿದು ಮಾರಾಟ ಮಾಡುವುದೇ ನಮ್ಮ ಜೀವನೋಪಾಯ. ಮೀನುಗಾರರ ಬದುಕು ಇದೇ ವೃತ್ತಿಯ ಮೇಲೆ ಅವಲಂಬಿತವಾಗಿದೆ. ಸರ್ಕಾರ ಮೀನುಗಾರರಿಗೆ ಅಗತ್ಯ ಸೌಲಭ್ಯಗಳು, ಮೂಲಸೌಕರ್ಯ ಹಾಗೂ ಮೀನುಗಾರಿಕೆಗೆ ಉತ್ತೇಜನ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ದಿಬ್ಬದಹಳ್ಳಿ, ಚನ್ನಪ್ಪ ಗಂಡಬೊಮ್ಮನಹಳ್ಳಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.



