ತಿರುಪತಿಯ ಇಸ್ಕಾನ್ ದೇವಸ್ಥಾನಕ್ಕೆ ಕಳೆದ ಮೂರು ದಿನದಲ್ಲಿ 4ನೇ ಬಾರಿ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.
ಐಸಿಸ್ ಉಗ್ರರು ಎಂದು ಹೇಳಿಕೊಂಡ ದುಷ್ಕರ್ಮಿಗಳು ಇ-ಮೇಲ್ ಸಂದೇಶದಲ್ಲಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಬೆದರಿಕೆ ಸಂದೇಶ ಬಂದ ಕೂಡಲೇ ತಿರುಪತಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಸರ್ಕಲ್ ಇನ್ ಸ್ಪೆಕ್ಟರ್ ಶ್ರೀನಿವಾಸಲು, ಕಳೆದ ಮೂರು ದಿನದಲ್ಲಿ ಬಂದ ನಾಲ್ಕನೇ ಹುಸಿ ಬಾಂಬ್ ಬೆದರಿಕೆ ಕರೆಯಾಗಿದ್ದು, ತಿರುಪತಿಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಭಕ್ತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಶನಿವಾರ ಬಂದ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ತಿರುಪತಿಯ ಎರಡು ಹೋಟೆಲ್ ಗಳಲ್ಲಿ ಶೋಧ ಕಾರ್ಯ ನಡೆದಿತ್ತು. ಇದಕ್ಕೂ ಮುನ್ನ ಮೂರು ಹೋಟೆಲ್ ಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ಬಂದಿದ್ದು, ಶೋಧ ಕಾರ್ಯದ ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿತ್ತು.