ಚುನಾವಣಾ ತಂತ್ರಗಾರಿಕೆ ತಜ್ಞ ಎಂದೇ ಕರೆಯಲಾಗುವ ಪ್ರಶಾಂತ್ ಕಿಶೋರ್ ಜಾಹಿರಾತು, ತಂತ್ರಗಾರಿಕೆ ಸೇರಿದಂತೆ ಒಂದು ಚುನಾವಣಾ ತಂತ್ರಗಾರಿಕೆಗೆ ಒಬ್ಬ ವ್ಯಕ್ತಿ, ಒಂದು ರಾಜಕೀಯಕ್ಕೆ 100 ಕೋಟಿ ರೂ. ಶುಲ್ಕ ಪಡೆಯುವುದಾಗಿ ಬಹಿರಂಗಪಡಿಸಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ತಮ್ಮದೇ ಪಕ್ಷದ ಪರ ಪ್ರಚಾರ ನಡೆಸುವಾಗ ಈ ವಿಷಯವನ್ನು ಪ್ರಶಾಂತ್ ಕಿಶೋರ್ ಬಹಿರಂಗಪಡಿಸಿದ್ದಾರೆ.
ಬೆಲಗಂಜ್ ನಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿದ್ದ ವೇಳೆ ಮುಸ್ಲಿಮ್ ಸಮುದಾಯ ಸೇರಿದಂತೆ ಹಲವು ಸಮುದಾಯಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಲು ನೀಡುವ ಪಡೆಯುವ ಸಂಭಾವನೆ ಎಷ್ಟು ಎಂದು ಪದೇಪದೆ ಕೇಳಲಾದ ಪ್ರಶ್ನೆಗೆ ಪ್ರಶಾಂತ್ ಕಿಶೋರ್ ಉತ್ತರಿಸಿದರು.
ದೇಶದ 10 ರಾಜ್ಯಗಳಲ್ಲಿ ನಾವು ನೀಡಿದ ತಂತ್ರಗಾರಿಕೆ ಆಧರಿಸಿ ಸರ್ಕಾರಗಳು ನಡೆಯುತ್ತಿವೆ ಎಂದು ಇದೇ ವೇಳೆ ಪ್ರಶಾಂತ್ ಕಿಶೋರ್ ಹೇಳಿದರು.
ರಾಜಕೀಯ ಪಕ್ಷ ನಡೆಸಲು ಅಗತ್ಯವಾದ ಹಣ ನನ್ನ ಬಳಿ ಇಲ್ಲ ಅಂತ ಅಂದುಕೊಂಡಿದ್ದೀರಾ? ಬಿಹಾರದಲ್ಲಿ ನಾನು ದುರ್ಬಲನಾಗಿದ್ದೇನೆ ಎಂದು ಭಾವಿಸಿದ್ದೀರಾ? ನನ್ನ ಸಂಭಾವನೆ ಎಷ್ಟು ಎಂದು ಯಾರಿಗೂ ಗೊತ್ತಿಲ್ಲ. ನಾನು ಒಂದು ಚುನಾವಣೆಗೆ ತಂತ್ರಗಾರಿಕೆ ರೂಪಿಸಲು ಕನಿಷ್ಠ 100 ಕೋಟಿ ರೂ. ಪಡೆಯುತ್ತೇನೆ. ಬಿಹಾರದಲ್ಲಿ ಚುನಾವಣೆ ನಡೆಸಲು ಒಂದು ಚುನಾವಣಾ ಒಪ್ಪಂದ ಮಾಡಿಕೊಂಡರೆ ಸಾಕು ಎಂದು ಪ್ರಶಾಂತ್ ಕಿಶೋರ್ ವಿವರಿಸಿದರು.
ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಜನ್ ಸುರಜ್ ಪಕ್ಷ ಬಿಹಾರದ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನವೆಂಬರ್ 20ರಂದು ನಾಲ್ಕು ಕ್ಷೇತ್ರಗಳಿಗೆ ನಡೆಯುವ ಚುನಾವಣೆ ಪ್ರಶಾಂತ್ ಕಿಶೋರ್ ಪಾಲಿಗೆ ಮೊದಲ ರಾಜಕೀಯ ಪ್ರವೇಶವಾಗಿದೆ.