ದೂರಗಾಮಿ ಭೂ ದಾಳಿ ಕ್ರೂಸ್ ಕ್ಷಿಪಣಿಯನ್ನು ಭಾರತ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಭಾರತದ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆಯಾಗಿದೆ.
ಒಡಿಶಾದ ಕಡಲತೀರದಲ್ಲಿ ಮಂಗಳವಾರ ಭಾರತ ರಕ್ಷಣಾ ಪಡೆ ಜಿಪಿಎಸ್ ಮೂಲಕ ಹಮ್ಮಿಕೊಂಡಿದ್ದ ನಿರ್ದಿಷ್ಟ ಗುರಿಯನ್ನು ವಿವಿಧ ಸ್ತರಗಳಲ್ಲಿ ಹಾಗೂ ವೇಗದ ನಿಯಂತ್ರಣದೊಂದಿಗೆ ನಡೆಸಿದ ಪರೀಕ್ಷೆ ಯಶಸ್ವಿಯಾಯಿತು.
ಕ್ಷಿಪಣಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೆನ್ಸಾರ್ ಸೇರಿದಂತೆ ವ್ಯವಸ್ಥೆ ಮೂಲಕ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ. ದೂರದರ್ಶನ, ರೇಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರಾಕಿಂಗ್ ಸಿಸ್ಟಮ್ ಮತ್ತು ಟೆಲಿಮೆಟ್ರಿ ಮೂಲಕ ಅದರ ಹಾರುವ ಮಾರ್ಗವನ್ನು ಸಂಪೂರ್ಣವಾಗಿ ಕಂಡುಹಿಡಿಯಲು ಮಾರ್ಗದರ್ಶಿಸಲಾಗಿತ್ತು.
ಬೆಂಗಳೂರಿನ ವೈಮಾನಿಕ ಅಭಿವೃದ್ಧಿ ಸಂಸ್ಥೆ ಎಲ್ ಆರ್ ಎಲ್ ಎಸಿಎಂ ಮತ್ತು ಡಿಎಆರ್ ಡಿಒ ಜೊತೆಯಾಗಿ ಅಭೃವೃದ್ಧಿಪಡಿಸಿದ ಕ್ಷಿಪಣಿಯಾಗಿದ್ದು, ಹೈದರಾಬಾದ್ ನ ಭಾರತ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಬೆಂಗಳೂರಿನ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಗಳು ಕೂಡ ಸಹಕರಿಸಿವೆ.
ದೂರಗಾಮಿ ಕ್ರೂಸ್ ಕ್ಷಿಪಣಿ ಯಶಸ್ವಿಯಾಗಿರುವುದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದು, ಸ್ವದೇಶೀ ನಿರ್ಮಿತ ಕ್ಷಿಪಣಿ ಯಶಸ್ಸಿನಿಂದ ಭಾರತ ಸ್ವಬಲದಿಂದ ರಕ್ಷಣಾ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಸಾಗಿದೆ ಎಂದರು.