ಡಿಜಿಟಲ್ ಅರೆಸ್ಟ್ ಮೂಲಕ ದೇಶಾದ್ಯಂತ ಸುಲಿಗೆ ಮಾಡುತ್ತಿದ್ದ ಬೃಹತ್ ವಂಚಕರ ಜಾಲವನ್ನು ಗುಜರಾತ್ ನ ಸೂರತ್ ಪೊಲೀಸರು ಭೇದಿಸಿದ್ದು, ಇವರ ಅಕ್ರಮಗಳನ್ನು ಕಂಡು ಸ್ವತಃ ಬೆಚ್ಚಿಬಿದ್ದಿದ್ದಾರೆ.
ಹೆಸರು ಗೊಂದಲದ ಬಗ್ಗೆ ನಾಲ್ವರು ಶಂಕಿತರನ್ನು ವಿಚಾರಣೆಗೊಳಪಡಿಸಿದಾಗ ಬೃಹತ್ ಜಾಲ ಬೆಳಕಿಗೆ ಬಂದಿದೆ. ಪ್ರಕರಣದ ಬೆನ್ನು ಹತ್ತಿದ ಅಹಮದಾಬಾದ್ ಸೈಬರ್ ಸೆಲ್ ಪೊಲೀಸರು ಮೂರು ತಿಂಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿ 25 ಜನರನ್ನು ಬಂಧಿಸಿದ್ದಾರೆ.
ದೇಶದ 15 ರಾಜ್ಯ ಹಾಗೂ ಕೇಂದ್ರಾಡಳಿ ಪ್ರದೇಶಗಳಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ ಸುಮಾರು 200 ಪ್ರಕರಣಗಳ ರೂವಾರಿಗಳು ಎಂದು ಹೇಳಲಾಗಿದ್ದು, 623 ಬ್ಯಾಂಕ್ ಖಾತೆಗಳಿಂದ 111 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಮೂರು ತಿಂಗಳ ಹಿಂದೆಯೇ ಪ್ರಕರಣ ಭೇದಿಸಿದ ಪೊಲೀಸರು ಅಂತಿಮವಾಗಿ 139 ಡೆಬಿಟ್ ಕಾರ್ಡ್, 336 ಸಿಮ್ ಕಾರ್ಡ್, 35 ಚೆಕ್ ಬುಕ್, 16 ಬ್ಯಾಂಕ್ ಕಿಟ್ಸ್, 36 ಮೊಬೈಲ್ ಸಂಖ್ಯೆಗಳನ್ನು ವಶಕ್ಕೆ ಪಡೆದಿದ್ದಾರೆ. ಸೂರತ್ ನಿಂದಲೇ ಇದುವರೆಗೆ 25 ಮಂದಿಯನ್ನು ಬಂಧಿಸಲಾಗಿದೆ. 623 ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ 370 ಸಕ್ರಿಯವಾಗಿದ್ದವು ಎಂದು ಪೊಲೀಸರು ವಿವರಿಸಿದ್ದಾರೆ.
ಭಾರತದ ಹೊರಗಿನಿಂದ ವಂಚನೆ ಮಾಡಲಾಗುತ್ತಿದೆ ಎಂದು ಬಿಂಬಿಸಲು ಸೈಬರ್ ವಂಚಕರು ನಿರ್ಲಿಪ್ತ ಖಾತೆಗಳನ್ನು ಬಳಸುತ್ತಿದ್ದು, ಇದಕ್ಕಾಗಿ ಹಲವು ಮಾರ್ಗಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು.
ತೈವಾನ್ ತಂತ್ರಜ್ಞಾನ ಬಳಸಿದ್ದ ಆರೋಪಿಗಳು ಮೊಬೈಲ್ ಗೆ ಬರುತ್ತಿದ್ದ ಒಟಿಪಿ ಮತ್ತು ಕರೆಗಳನ್ನು ತೈವಾನ್ ಮತ್ತು ದುಬೈನಿಂದ ಬರುತ್ತಿರುವಂತೆ ಹಾಗೂ ಸ್ವೀಕರಿಸುತ್ತಿರುವಂತೆ ಮಾಡುತ್ತಿದ್ದರು. ಇದರಿಂದ ಇವರ ಜಾಲ ಭೇದಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ದಿನಗೂಲಿ ನೌಕರರಿಗೆ ಕೆಲವು ಸಾವಿರ ರೂಪಾಯಿ ನೀಡಿ ಬ್ಯಾಂಕ್ ನ ಡೆಬಿಟ್ ಕಾರ್ಡ್ ಮತ್ತಿತರ ಬ್ಯಾಂಕ್ ಖಾತೆಗಳ ದಾಖಲೆ ಸಂಗ್ರಹಿಸುತ್ತಿದ್ದರು. ಈ ದಾಖಲೆಗಳನ್ನು ದುಬೈಗೆ ಆರೋಪಿಗಳು ರವಾನಿಸುತ್ತಿದ್ದರು. ಈ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ಹಣ ಡ್ರಾ ಮಾಡಿದ ನಂತರ ಕ್ರಿಸ್ಪೊ ಕೆರೆನ್ಸಿ ಮೂಲಕ ಹಣದ ಮೂಲ ಪತ್ತೆಯಾಗದಂತೆ ಮಾಡಿ ಹವಾಲಾ ಮೂಲಕ ತರಿಸಿಕೊಳ್ಳುತ್ತಿದ್ದರು.