ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧನಾಗಿದ್ದು, ನಿಲುವು ಬದಲಿಸುವುದಿಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
ಸಿಎನ್ ಬಿಸಿ ಜಾಗತಿಕ ನಾಯಕ ಸಮ್ಮೇಳನದಲ್ಲಿ ಮಾತನಾಡಿದ ಅವರು, 70 ಗಂಟೆಗಳ ಕೆಲಸ ಅವಧಿ ಬಗ್ಗೆ ನನ್ನ ಹೇಳಿಕೆ ಬಗ್ಗೆ ಸಾಕಷ್ಟು ಟೀಕೆ ಬಂದಿದೆ. ಆದರೆ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ದೇಶ ಅಭಿವೃದ್ದಿ ಆಗಬೇಕಾದರೆ ಕಠಿಣ ಶ್ರಮ ಅಗತ್ಯವಿದೆ ಹೊರತು ಆರಾಮ ಜೀವನದಿಂದ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಈ ವಯಸ್ಸಿನಲ್ಲಿಯೂ ವಾರದಲ್ಲಿ 100 ಗಂಟೆಗಳ ಕೆಲಸ ಮಾಡುತ್ತಿದ್ದಾರೆ. ಬೇರೆಯವರಿಗೆ 70 ಗಂಟೆ ಕೆಲಸ ಮಾಡಲು ಏನು ಕಷ್ಟ ಎಂದು ಅವರು ಪ್ರಶ್ನಿಸಿದರು.
ಕಠಿಣ ಶ್ರಮ ಪಡುವವರನ್ನು ಪ್ರಶಂಸಿಸುತ್ತಾರೆ. ಆದರೆ ನಾವು ಮಾಡಬೇಕು ಎಂದಾಗ ನೋವಾಗುತ್ತದೆ. ಜರ್ಮನಿ ಮತ್ತು ಜಪಾನ್ ರಾಷ್ಟ್ರಗಳು ಕೂಡ ಭಾರತೀಯರು ಕಠಿಣ ಶ್ರಮದ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿರುವುದನ್ನು ಅವರು ಉಲ್ಲೇಖಿಸಿದರು.
ಜರ್ಮನಿ ಮತ್ತು ಜಪಾನ್ ದೇಶಗಳು ಅಭಿವೃದ್ಧಿ ಆಗಲು ಅಲ್ಲಿನ ಜನರು ಕಷ್ಟಪಟ್ಟು ದುಡಿಯುತ್ತಾರೆ. ನಾನು ಕೆಲಸ ಮಾಡುವಾಗಲೂ ವಾರದಲ್ಲಿ 6.5 ದಿನ ಅಂದರೆ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ. ಮುಂಜಾನೆ 6.30ಕ್ಕೆ ಕಚೇರಿಗೆ ಬಂದರೆ ರಾತ್ರಿ 8.40ಕ್ಕೆ ಮರಳುತ್ತಿದ್ದೆ ಎಂದು ನಾರಾಯಣಮೂರ್ತಿ ವಿವರಿಸಿದರು.
ಕಠಿಣ ಶ್ರಮವೊಂದೇ ಅಭಿವೃದ್ದಿಗೆ ದಾರಿ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನೀವು ಎಷ್ಟೇ ಬುದ್ದಿವಂತರಾಗಿದ್ದರೂ ಕೂಡ ಕಠಿಣ ಶ್ರಮ ಪಡಲೇಬೇಕು ಎಂದು ಅವರು ಹೇಳಿದರು.