ಹರಿಯಾಣದ ಮಧ್ಯಮ ವೇಗಿ ಅನ್ಸುಲ್ ಕಮೋಜ್ ರಣಜಿ ಟ್ರೋಫಿಯ ಒಂದೇ ಇನಿಂಗ್ಸ್ ನಲ್ಲಿ ಪೂರ್ಣ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಶುಕ್ರವಾರ ನಡೆದ ಕೇರಳ ವಿರುದ್ಧದ ಸಿ ಗುಂಪಿನ ಪಂದ್ಯದಲ್ಲಿ 23 ವರ್ಷದ ಅನ್ಸುಲ್ ಕಮೋಜ್ 30.1 ಓವರ್ ಗಳಲ್ಲಿ 49 ರನ್ ನೀಡಿ 10 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ರಣಜಿ ಇತಿಹಾಸದಲ್ಲಿ ಈ ಸಾಧನೆ ಮಾಡಿದ ೩ನೇ ಬೌಲರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
2024ರಲ್ಲಿ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಈ ಯುವ ಬೌಲರ್ ನನ್ನು ಈ ಬಾರಿ ತಂಡದಲ್ಲಿ ಉಳಿಸಿಕೊಳ್ಳದೇ ಕೈ ಬಿಡಲಾಗಿದೆ. ಇದರಿಂದ ಈ ಬೌಲರ್ ಐಪಿಎಲ್ ಹರಾಜಿನಲ್ಲಿ ಗಮನ ಸೆಳೆಯುವ ಸಾಧ್ಯತೆ ಇದೆ.
ಬೆಂಗಾಲ್ ನ ಪ್ರೇಮಾಂಗ್ಶು ಚಟರ್ಜಿ [1956ರಲ್ಲಿ ಅಸ್ಸಾಂ ವಿರುದ್ಧ 10/20] ಮತ್ತು ರಾಜಸ್ಥಾನ್ ನ ಪ್ರದೀಪ್ ಸುಂದರನ್ [1985ರಲ್ಲಿ ವಿದರ್ಭ ವಿರುದ್ಧ] ಈ ಸಾಧನೆ ಮಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ೧೦ನೇ ಬೌಲರ್ ಎಂಬ ಗೌರವಕ್ಕೆ ಅನ್ಸುಲ್ ಪಾತ್ರರಾಗಿದ್ದಾರೆ.
ಪಂದ್ಯದ ಮೂರನೇ ದಿನವಾದ ಗುರುವಾರ 8 ವಿಕೆಟ್ ಪಡೆದಿದ್ದ ಅನ್ಸುಲ್ ಶುಕ್ರವಾರ ಆಟ ಆರಂಭವಾಗುತ್ತಿದ್ದಂತೆ ಉಳಿದೆರಡು ವಿಕೆಟ್ ಪಡೆದು 10 ವಿಕೆಟ್ ಗೊಂಚಲಿನ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅನ್ಸುಲ್ 19 ಪಂದ್ಯಗಳಿಂದ 50 ವಿಕೆಟ್ ಸಾಧನೆ ಕೂಡ ಮಾಡಿದರು. ಕೇರಳ ತಂಡ ಮೊದಲ ಇನಿಂಗ್ಸ್ ನಲ್ಲಿ 291 ರನ್ ಗೆ ಆಲೌಟಾಗಿದೆ.