ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳ ಮತ್ತು ಮಣಿಪುರದಲ್ಲಿ ಹಿಂಸಾಚಾರ ನಡೆದಿದೆ. ಮಧ್ಯಾಹ್ನ 11 ಗಂಟೆಯ ವೇಳೆ ಸುಮಾರು ಶೇ.30ರಷ್ಟು ಮತದಾನವಾಗಿದೆ.
21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 102 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. 39 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ತಮಿಳುನಾಡಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ಪೈಪೋಟಿ ಇರುವ ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದಿರುವ ವರದಿಯಾಗಿದೆ. ಕಳೆದ 6 ತಿಂಗಳಿಂದ ಕೋಮುಗಲಭೆಯಿಂದ ತತ್ತರಿಸಿರುವ ಮಣಿಪುರದಲ್ಲಿ ಹಿಂಸಾಚಾರ ವರದಿಯಾಗಿದ್ದು, ವ್ಯಕ್ತಿಯೊಬ್ಬ ಮತಕೇಂದ್ರದ ಬಳಿ ಗುಂಡು ಹಾರಿಸಿದ್ದು, ಜನರು ರಕ್ಷಣೆಗಾಗಿ ಓಡಿ ಹೋಗಿದ್ದಾರೆ.
ಮಣಿಪುರದ ಮೊಯಿಂಗ್ ಪ್ರದೇಶದ ತಮಂಗ್ ಪೋಪ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ರಕ್ಷಣೆಗಾಗಿ ಓಡಿ ಹೋಗಿದ್ದಾರೆ.
ಹಿಂಸಾಚಾರದ ನಡುವೆಯೂ ಪಶ್ಚಿಮ ಬಂಗಳಾದಲ್ಲಿ ಮಧ್ಯಾಹ್ನ 11 ಗಂಟೆ ವೇಳೆಗೆ ಅತೀ ಹೆಚ್ಚು ಶೇ.33.56ರಷ್ಟು ಮತದಾನವಾಗಿದೆ. ಮೇಘಾಲಯದಲ್ಲಿ ಶೇ.31.65, ಮಧ್ಯಪ್ರದೇಶದಲ್ಲಿ ಶೇ.30.46, ಛತ್ತೀಸಗಢದಲ್ಲಿ ಶೇ.28.12 ಮತ್ತು ಮಣಿಪುರದಲ್ಲಿ ಶೇ.27.74 ಮತದಾನವಾಗಿದೆ.