ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆ ಪೀತಬೈಲ್ ನಲ್ಲಿ ಸೋಮವಾರ ತಡರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ದಾಳಿ ವೇಳೆಯಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ ಆಗಿದ್ದಾರೆ.
ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಕೆಲವು ದಿನದಿಂದ ನಕ್ಸಲ್ ಸಂಚಾರ ಹೆಚ್ಚಾಗಿದ್ದರಿಂದ ಎಎನ್ ಎಫ್ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದು ಸೋಮವಾರ ತಡರಾತ್ರಿ 4 ಮಂದಿ ನಕ್ಸಲರ ತಂಡವು ಪೀತ ಬೈಲ್ ಸಮೀಪ ರೇಶನ್ ಗಾಗಿ ಬಂದಿದ್ದಾಗ ಈ ಘಟನೆ ನಡೆದಿದೆ.
ಎಎನ್ ಎಫ್ ತಂಡ ಕಾರ್ಯಾಚರಣೆ ವೇಳೆ ದಾಳಿ- ಪ್ರತಿದಾಳಿ ನಡೆದಿದ್ದು, ಪೊಲೀಸರ ಗುಂಡಿನ ದಾಳಿಗೆ ವಿಕ್ರಂ ಗೌಡ ಬಲಿಯಾಗಿದ್ದಾರೆ. ಉಳಿದ ಮೂವರು ಮಂದಿ ಪರಾರಿ ಆಗುವಲ್ಲಿ ಯಶಸ್ವಿಯಾಗಿದ್ದಾರೆ.
ಎಎನ್ ಎಫ್ ಕೂಂಬಿಂಗ್ ಮುಂದುವರೆಸಿದ್ದು, ಪರಾರಿಯಾದ ಲತಾ ಸೇರಿದಂತೆ ಇತರರ ಶೋಧ ನಡೆಯುತ್ತಿದೆ ಎಎನ್‌ಎಫ್ ಮೂಲಗಳು ತಿಳಿಸಿವೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಕೇರಳದಿಂದ ಆಗಮಿಸಿದ್ದ ನಕ್ಸಲರ ತಂಡ ಇತ್ತೀಚೆಗೆ ಚಿಕ್ಕಮಗಳೂರು ಬಳಿ ಸುಬ್ಬಣ್ಣ ಎಂಬುವವರ ಮನೆಯಲ್ಲಿ ಊಟ ಮಾಡಿ ಹೋಗಿದ್ದು, ಈ ವೇಳೆ ಮೂರು ಬಂದೂಕುಗಳು ಪತ್ತೆಯಾಗಿದ್ದವು. ಇದರಿಂದ ರಾಜ್ಯದಲ್ಲಿ ಮತ್ತೆ ನಕ್ಸಲರು ಕಾಲಿಟ್ಟಿರುವ ಬಗ್ಗೆ ಲಭಿಸಿದ ಮಾಹಿತಿ ಆಧರಿಸಿ ಪೊಲೀಸರು ಚಿಕ್ಕಮಗಳೂರು ಮತ್ತು ಉಡುಪಿ ಕಾಡುಗಳಲ್ಲಿ ಕೂಂಬಿಂಗ್ ಆರಂಭಿಸಿದ್ದರು.