ಬೀದರ್ ಜಿಲ್ಲೆಯ ಔರಾದ್ ನಲ್ಲಿ ನವೆಂಬರ್ 23, 24ರಂದು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನಡೆಯಲಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ತಾಲೂಕಿನ ಭಕ್ತರು 40 ಸಾವಿರ ಹೋಳಿಗೆ ಅರ್ಪಿಸಿದ್ದಾರೆ.
ಔರಾದ್ ತಾಲೂಕಿನ ಭಕ್ತರು ವಿಶೇಷ ಉಪಹಾರ ಶೇಂಗಾ ಹೋಳಿಗೆ, ಜೋಳದ ಹಿಟ್ಟಿನ ದಪಾಟಿ ಉಣಬಡಿಸಲು ಭಕ್ತರು ನೀಡಿದ ದೇಣಿಗೆಯಿಂದ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು. ತಾಲೂಕಿನಲ್ಲಿ ದೇಣಿಗೆ ನೀಡಲು ಸ್ವಹಿತಾಸಕ್ತಿಯಿಂದ ಮುಂದೆ ಬರುತ್ತಿದ್ದಾರೆ.
ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು. ನಾಡಿನ ಮೂಲೆ ಮೂಲೆಯಿಂದ ಆಗಮಿಸುವ ಜನರಿಗೆ ಶೇಂಗಾ ಹೋಳಿಗೆ, ತುಪ್ಪ ಹಾಗೂ ಜೋಳದ ಹಿಟ್ಟಿನ ದಪಾಟಿ ಸವಿ ಉಣಬಡಿಸಲು ಔರಾದ್ ಭಕ್ತರು ಸಜ್ಜಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಪಟ್ಟಣದ ಬಸವ ಗುರುಕುಲ ಶಾಲೆಯ ಆವರಣದಲ್ಲಿ 35-40 ಜನ ಮಹಿಳೆಯರು ಶೇಂಗಾ ಹೋಳಿಗೆ, ದಪಾಟಿ ಮಾಡುತ್ತಿದ್ದಾರೆ. ಅಲ್ಲದೇ 2 ಕ್ವಿಂಟಲ್ ತುಪ್ಪ ಸಂಗ್ರಹವಾಗಿದೆ. ಇನ್ನೂ ದೇಣಿಗೆ ನೀಡುವವರ ಸಂಖ್ಯೆ ಹೆಚ್ಚಬಹುದು ಎನ್ನಲಾಗುತ್ತಿದೆ.