ಭಾರತ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
ಭಾನುವಾರ ನಡೆದ ಐಪಿಎಲ್ ಟಿ-20 ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂ. ಮೂಲಧನ ಹೊಂದಿದ್ದ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಲಕ್ನೂ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದ ಕೆಎಲ್ ರಾಹುಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಟೂರ್ನಿಯ ಪಂದ್ಯದಲ್ಲಿ ಮಾಲೀಕರಿಂದ ಅಪಮಾನಕ್ಕೆ ಒಳಗಾಗಿದ್ದ ರಾಹುಲ್ ತಂಡ ತೊರೆದಿದ್ದರು. ಇದರಿಂದ ಅವರು ತವರು ತಂಡವಾದ ಆರ್ ಸಿಬಿಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಆರಂಭದಲ್ಲಿ ಆಸಕ್ತಿ ತೋರಿದ ಆರ್ ಸಿಬಿ ಪೈಪೋಟಿಯ ಮೇಲೆ ಬಿಡ್ ಮಾಡಿತು. ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಎಂಟ್ರಿ ಕೊಡುತ್ತಿದ್ದಂತೆ ಆರ್ ಸಿಬಿ ಹಿಂದೆ ಸರಿಯಿತು. ಕೆಎಲ್ ರಾಹುಲ್ ಗೆ 20 ಕೋಟಿ ರೂ. ಅಧಿಕ ಹೂಡಿಕೆ ಮಾಡಿ ಖರೀದಿಸುತ್ತಾರೆ ಎಂಬ ಭರವಸೆ ಹುಸಿಯಾಯಿತು.
ಆರ್ ಸಿಬಿ ಇಡೀ ಐಪಿಎಲ್ ಹರಾಜಿನಲ್ಲಿ ಯಾವುದೇ ಆಸಕ್ತಿ ತೋರದೇ ಇರುವುದು ಅಚ್ಚರಿ ಮೂಡಿಸಿತು. ತಂಡದಲ್ಲಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿರುವ ಆರ್ ಸಿಬಿ 83 ಕೋಟಿ ರೂ. ಬಳಸುವ ಅವಕಾಶ ಹೊಂದಿದೆ. ಆದರೆ ಭಾನುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಒಬ್ಬ ಆಟಗಾರರನ್ನು ಮಾತ್ರ ಖರೀದಿಸಿತು.
2 ಕೋಟಿ ಮೂಲಧನ ನಿಗದಿಯಾಗಿದ್ದ ಲಿಯಾನ್ ಲಿವಿಂಗ್ ಸ್ಟನ್ ಅವರನ್ನು 8.75 ಕೋಟಿ ರೂ.ಗೆ ಆರ್ ಸಿಬಿ ಖರೀದಿಸಿತು. ಉಳಿದ ಯಾವುದೇ ಪ್ರಮುಖ ಆಟಗಾರನ ಖರೀದಿಗೆ ಮುಂದಾಗಲಿಲ್ಲ. ಹರಾಜಿನಲ್ಲಿ ಆಗೊಮ್ಮೆ-ಈಗೊಮ್ಮೆ ಕಾಣಿಸಿಕೊಂಡರೂ 7-8 ಕೋಟಿ ಮೇಲೆ ಯಾವುದೇ ಬಿಡ್ ಮಾಡಲಿಲ್ಲ.