ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇದರಿಂದ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾಯಾಲಯದ ಸೂಚನೆ ಮೇರೆಗೆ ಮೊಘಲ್ ಕಾಲದಲ್ಲಿ ನಿರ್ಮಾಣವಾದ ಜಾಮಾ ಮಸೀದಿಯ ಸಮೀಕ್ಷೆಗೆ ಮುಂದಾದಾಗ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿದ್ದು, ಹಿಂಸಾಚಾರಕ್ಕೆ ತಿರುಗಿದೆ.
ಹಿಂದೂ ದೇವಸ್ಥಾನದ ಜಾಗದಲ್ಲಿ ಮಸೀದಿ ನಿರ್ಮಾಣವಾಗಿದೆ ಎಂಬ ವಾದದ ಹಿನ್ನೆಲೆಯಲ್ಲಿ ನ್ಯಾಯಾಲಯ ಮಸೀದಿ ಸರ್ವೆಗೆ ಸೂಚಿಸಿತ್ತು. ಸರ್ವೆಗೆ ಅಧಿಕಾರಿಗಳು ಆಗಮಿಸಿದ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿದ್ದು, ಎರಡೂ ಕೋಮಿನ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಸಮೀಕ್ಷೆಗೆ ವಕೀಲರ ತಂಡ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಒಂದು ಕೋಮಿನ ಜನರು ಕಲ್ಲುತೂರಾಟ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದೂ ಅಲ್ಲದೇ ಇತರೆ ಕೋಮಿನ ಗುಂಪು ಪಾಲ್ಗೊಂಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ಹಿಂಸಾಚಾರದಲ್ಲಿ ಇರಿತಕ್ಕೆ ಒಳಗಾದ ನಯೀಮ್, ಬಿಲಾಲ್ ಮತ್ತು ನುಮಾನ್ ಎಂಬ ಮೂವರು ಮೃತಪಟ್ಟಿದ್ದಾರೆ. ಪೊಲೀಸ್ ಸೂಪರಿಟೆಂಡೆಂಟ್ ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ಹಿಂದೂ ದೇವಸ್ಥಾನವನ್ನು ಮೊಘಲ್ ದೊರೆ ಬಾಬರ್ 1529ರಲ್ಲಿ ಧ್ವಂಸಮಾಡಿ ಮಸೀದಿ ನಿರ್ಮಿಸಿದ್ದ ಎಂದು ವಾದಿಸಲಾಗುತ್ತಿದೆ.