ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಭಾನುವಾರ ಮಸೀದಿ ಸಮೀಕ್ಷೆಗೆ ತಡೆಯೊಡ್ಡಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸಮಾಜವಾದಿ ಸಂಸದ ಸೇರಿ 400 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಸಂಭಾಲ್ ಪೊಲೀಸರು ಇದುವರಗೆ 25 ಮಂದಿಯನ್ನು ಬಂಧಿಸಿದ್ದು, 7 ಪ್ರಕರಣಗಳಲ್ಲಿ 400 ಮಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಸಂಭಾಲ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಜಿಯುರ್ ರೆಹಮಾನ್ ಬರ್ಕ್, ಪಕ್ಷದ ಮುಖಂಡ ಇಕ್ಬಾಲ್ ಮೆಹಮೂದ್ ಪುತ್ರ ನವಾಬ್ ಇಕ್ಬಾಲ್ ಸುಹೇಲ್ ಸೇರಿದಂತೆ ಹಲವು ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಭಾಲ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮೊಘಲ್ ಕಾಲದಲ್ಲಿ ಹಿಂದೂ ದೇವಸ್ಥಾನ ಕೆಡವಿ ಆ ಜಾಗದಲ್ಲಿ ಜಮಾ ಮಸೀದಿ ನಿರ್ಮಿಸಲಾಗಿದೆ ಎಂಬ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಸ್ಥಳದ ಮಹಜರು ಹಾಗೂ ಸರ್ವೆ ನಡೆಸುವಂತೆ ಸೂಚಿಸಿತ್ತು.
ಸರ್ವೆ ನಡೆಸಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ ಸ್ಥಳೀಯರು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿದ್ದು, ಎರಡು ಕೋಮುಗಳ ನಾಲ್ವರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.