ಚಳಿಗಾಲದ ಕಾರಣ ಹಲವು ರೈಲುಗಳು ನಿಗದಿತ ಸಮಯ ಕಾಪಾಡಿಕೊಳ್ಳಲು ವಿಫಲರಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇದರಿಂದ ಖರ್ಚು-ವೆಚ್ಚ ಕೂಡ ಹೆಚ್ಚಾಗುವ ಒತ್ತಡಕ್ಕೆ ಸಿಲುಕಿದ್ದಾರೆ.
ಚಳಿಗಾಲದ ಕಾರಣ ಹಿಬ್ಬನಿ, ದಟ್ಟವಾದ ಮಂಜು- ಮಳೆ ಮುಂತಾದ ಕಾರಣಗಳಿಗಾಗಿ ರೈಲುಗಳು ನಿಗದಿತ ಸಮಯದಲ್ಲಿ ಗುರಿ ತಲುಪಲು ವಿಫಲವಾಗುತ್ತಿವೆ.
ರೈಲುಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲ ಮನಗಂಡು ಉಚಿತ ಆಹಾರ ಪೂರೈಕೆ ಮಾಡಲು ಮುಂದಾಗಿದೆ.
ರಾಜಧಾನಿ, ಶತಾಬ್ಧಿ ಮತ್ತು ಡುರಾಂಟೊ ಮುಂತಾದ ಪ್ರೀಮಿಯಮ್ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರೈಲು ವಿಳಂಬವಾದರೆ ಉಚಿತವಾಗಿ ಆಹಾರ ಪೂರೈಸುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ರೈಲುಗಳು ನಿಗದಿತ ಸ್ಥಳ ತಲುಪಲು ೨ರಿಂದ ೩ ಗಂಟೆಯಷ್ಟು ವಿಳಂಬವಾದರೆ ಪ್ರಯಾಣಿಕರಿಗೆ ಉಚಿತ ಆಹಾರ ನೀಡಬೇಕು ಎಂಬ ನಿಯಮವಿದ್ದು, ಇದನ್ನು ಆಹಾರ ಸಿದ್ಧಪಡಿಸಿ ಸರಬರಾಜು ಮಾಡುವ ಗುತ್ತಿಗೆ ಪಡೆದ ಕಂಪನಿಗಳ ಗಮನಕ್ಕೆ ತರಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ವಿವರಿಸಿದೆ.
ರೈಲು ವಿಳಂಬವಾದರೆ ಪ್ರಯಾಣಿಕರಿಗೆ ಸಿಗುವ ಆಹಾರ ಸೌಲಭ್ಯಗಳು ಹೀಗಿವೆ.
ಕಾಫಿ/ಟೀ ಜೊತೆ ಬಿಸ್ಕತ್ ಅಥವಾ ಕಾಫಿ/ಟೀ ಪ್ಯಾಕೆಟ್ ನೀಡಲಾಗುತ್ತದೆ. ಇದರಲ್ಲಿ ಕಾಫಿ/ಟಿ ಜೊತೆ ಸಕ್ಕರೆ, ಸಕ್ಕರೆ ರಹಿತ ಪ್ಯಾಕೆಟ್, ಹಾಲಿನ ಪುಡಿ ಇರುತ್ತದೆ.
ಸಂಜೆ ಸಮಯದಲ್ಲಿ ಕಾಫಿ/ಟೀ ಜೊತೆ ಉಪಹಾರ: ಇದರಲ್ಲಿ ನಾಲ್ಕು ಬ್ರೇಡ್ ಪೀಸ್, ಬೆಣ್ಣೆ, 200 ಎಂಎಲ್ ಜ್ಯೂಸ್ ಅಥವಾ ಕಾಫಿ/ಟೀ.
ಮಧ್ಯಾಹ್ನವಾಗಿದ್ದರೆ ಭೋಜನ ಸಿಗುತ್ತದೆ. ಭೋಜನದಲ್ಲಿ ಅನ್ನ, ದಾಲ್, ಕರಿ, ಉಪ್ಪಿನಕಾಯಿ ಇರುತ್ತದೆ. ಇದರ ಬದಲಿಗೆ ೭ ಪೂರಿ, ಮಿಶ್ರ ತರಕಾರಿಯ ಪಲ್ಯ ಅಥವಾ ಸಾಗು, ಉಪ್ಪಿನಕಾಯಿ, ಉಪ್ಪು ಮತ್ತು ಸಕ್ಕರೆ ಪ್ಯಾಕೆಟ್ ಸೇರಿರುತ್ತದೆ.
ಒಂದು ವೇಳೆ ತುಂಬಾ ಅಂದರೆ 5 ಗಂಟೆ ಮೇಲೆ ತಡವಾದರೆ ಪ್ರಯಾಣಿಕರು ಟಿಕೆಟ್ ರದ್ದು ಮಾಡಿ ಪೂರ್ಣ ಶುಲ್ಕ ವಾಪಸ್ ಪಡೆಯಬಹುದು. ಅಲ್ಲದೇ ರೈಲು ವಿಳಂಬವಾದರೆ ಹೆಚ್ಚುವರಿ ದರದಲ್ಲಿ ಕೂಡ ಕಡಿತ ಮಾಡಲಿದೆ.