ಅನಾರೋಗ್ಯದಿಂದ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಸಹಜ ಜಾಮೀನು ಹಾಗೂ ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್ ಇನ್ನಿತರ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಹೈಕೋರ್ಟ್ ಮುಂದೂಡಿದೆ.
ದರ್ಶನ್ ಪರವಾಗಿ ಹಿರಿಯ ಲಾಯರ್ ಸಿ.ವಿ. ನಾಗೇಶ್ ಇತ್ತೀಚೆಗೆ ಹೈಕೋರ್ಟ್ ನಲ್ಲಿ ವಾದ ಮಂಡನೆ ಮಾಡಿದ್ದರು. ಮಂಗಳವಾರ ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಸೆಬಾಸ್ಟಿಯನ್ ಅವರು ವಾದಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಎಲ್ಲರೂ ಹೊಡೆದ ಕಾರಣದಿಂದ ರೇಣುಕಾಸ್ವಾಮಿ ಸಾವು ಸಂಭವಿಸಿರಬಹುದು ಎಂದು ವಾದ ಮಾಡಲಾಗಿದೆ.
ಆರೋಪಿಗಳ ಪರವಾಗಿ ವಕೀಲರ ವಾದ ಮಂಡನೆ ಅಂತ್ಯವಾಗಿದೆ. ಡಿಸೆಂಬರ್ 6 ರಂದು ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಾಡಲಿದ್ದಾರೆ. ಆ ಬಳಿಕ ಜಾಮೀನಿಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ನೀಡಲಿದೆ. ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನು‘ವಿಸುತ್ತಿದ್ದಾರೆ. ಒಂದು ವೇಳೆ ಜಾಮೀನು ಸಿಗದಿದ್ದರೆ ಅವರ ಜೈಲುವಾಸ ಮುಂದುವರಿಯಲಿದೆ.
ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ಆದ್ದರಿಂದ ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರು ಸಲಹೆ ನೀಡಿದ್ದರಿಂದ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ಈವರೆಗೂ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಲ್ಲ. ಬಿಪಿ ವ್ಯತ್ಯಾಸ ಆಗುತ್ತಿರುವುದರಿಂದ ಶಸ್ತ್ರ ಚಿಕಿತ್ಸೆಯನ್ನು ಸದ್ಯಕ್ಕೆ ಮಾಡಿಲ್ಲ ಎಂಬ ಮಾಹಿತಿ ಇದೆ. ದರ್ಶನ್ ಅವರಿಗೆ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.