ಬಿಜೆಪಿ ಸದಸ್ಯ ಸಿಟಿ ರವಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಪರಿಷತ್ ಸಭಾಪತಿ ಹಾಗೂ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ವಿಧಾನ ಪರಿಷತ್‌ನಲ್ಲಿಗುರುವಾರ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ತಮ್ಮನ್ನು ಅಸಾಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿ ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿಗೆ ದೂರು ನೀಡಿದ್ದು, ಇದೀಗ ವಿಧಾನಪರಿಷತ್ ಸದಸ್ಯರ ಸಹಿ ಪಡೆದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಸಿಟಿ ರವಿ ಅವರನ್ನು ಕೂಡಲೇ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿರು. ಅಲ್ಲದೇ ಸಾಭಪತಿಗೆ ಲಿಖಿತ ದೂರು ನೀಡಿದರು. ಈ ವೇಳೆ ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೆಂಬಲ ನೀಡಿ ಸಭಾಪತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಭಾಪತಿ ಆಡಿಯೋ-ವೀಡಿಯೋ ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರೂ ಕಾಂಗ್ರೆಸ್ ಸದಸ್ಯರು ಕೇಳದೇ ಕಾಂಗ್ರೆಸ್ ಸದಸ್ಯರನ್ನೇ ಸಾಕ್ಷಿದಾರರನ್ನಾಗಿ ಮಾಡಿಕೊಂಡು ಸಿಟಿ ರವಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಸಭಾಪತಿ ಕಲಾಪ ಮುಂದೂಡಿದ ವೇಳೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಹತ್ತು ಬಾರಿ ಸಿಟಿ ರವಿ ಆ ಪದವನ್ನು ಬಳಕೆ ಮಾಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ದೂರಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಧ್ವನಿ ಗೂಡಿಸಿದರು.
ನಂತರ ಸ್ಪೀಕರ್ ಹೊರಟ್ಟಿ ಕಚೇರಿಗೆ ತೆರಳಿದ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಸದಸ್ಯತ್ವ ರದ್ದು ಮಾಡುವಂತೆ ದೂರು ನೀಡಿದರು. ದೂರು ಸ್ವೀಕರಿಸಿದ ಸ್ಪೀಕರ್ ವಿಡಿಯೋ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬೆಂಬಲಿಗರಿಂದ ಹಲ್ಲೆಗೆ ಯತ್ನ: 30 ಮಂದಿ ವಶಕ್ಕೆ
ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಹೆಬ್ಬಾಳ್ಕರ್ ಅವರ ಖಾಸಗಿ ಪಿಎ ಸಂಗನಗೌಡ ಸೇರಿದಂತೆ ಹಲವಾರು ಬೆಂಬಲಿಗರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಸಿಟಿ ರವಿ ಮೇಲೆ ಹಲ್ಲೆಗೆ ಮುಂದಾದರು.
ಮಾರ್ಷಲ್ ಗಳು ಸಿಟಿ ರವಿ ಅವರನ್ನು ಸಮಾಧಾನಪಡಿಸಿ ಹೊರಗೆ ಸುರಕ್ಷಿತವಾಗಿ ಕರೆದೊಯ್ಯಲು ಪ್ರಯತ್ನಸಿದಾಗ ಉದ್ರಿಕ್ತಗೊಂಡ ಬೆಂಬಲಿಗರು ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಮಾರ್ಷಲ್ ಗಳು ಸುಮಾರು 30 ಮಂದಿಯನ್ನು ವಶಕ್ಕೆ ಪಡೆದಿದ್ದು, ಎಲ್ಲಾ ಕಾರಿಡಾರ್ ಗೇಟ್ ಗಳನ್ನು ಮುಚ್ಚಿದ್ದಾರೆ.
ಅಶ್ಲೀಲ ಪದ ಬಳಸಿಲ್ಲ: ಸಿಟಿ ರವಿ
ಕಲಾಪ ಮುಂದೂಡಿದ್ದರಿಂದ ಹೊರ ಬಂದ ಸಿಟಿ ರವಿ ಮೇಲೆ ಹೆಬ್ಬಾಳ್ಕರ್ ಬೆಂಬಲಿಗರು ಹಲ್ಲೆಗೆ ಯತ್ನಿಸಿದರು. ಸುವರ್ಣ ಸೌಧದ ಬಳಿ ಕಾರು ಹತ್ತಲು ಯತ್ನಿಸಿದ ರವಿ ಮೇಲೆ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ. ನಂತರ ಕಾರಿಡಾರ್ ನಾನೆಲ್ಲೂ ಅಶ್ಲೀಲ ಪದವನ್ನು ಬಳಸಿಲ್ಲ. ವಿಡಿಯೋ ಪರಿಶೀಲನೆ ಬಳಿಕ ಪ್ರತಿಕ್ರಿಯೆ ಕೊಡುತ್ತೇನೆ. ಅಂಬೇಡ್ಕರ್‌ಗೆ ಕಾಂಗ್ರೆಸ್ ಹೇಗೆ ಅನ್ಯಾಯ ಮಾಡಿತು ಎಂದು ಹೇಳಿದ್ದೆ. ನಾನು ಯಾರಿಗೂ ಯಾವ ಪದವನ್ನೂ ಬಳಸಿಲ್ಲ ಎಂದು ತಿಳಿಸಿದರು.