Friday, April 25, 2025
Google search engine
Homeರಾಜ್ಯಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಚೆನ್ನೈನಲ್ಲಿ ರೋಡ್-ಶೋ ನಡೆಸಿದ ಸಚಿವ ಎಂಬಿ ಪಾಟೀಲ!

ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಚೆನ್ನೈನಲ್ಲಿ ರೋಡ್-ಶೋ ನಡೆಸಿದ ಸಚಿವ ಎಂಬಿ ಪಾಟೀಲ!

ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಸಿದ್ಧತೆಯ ಭಾಗವಾಗಿ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಸೋಮವಾರ ಚೆನ್ನೈನಲ್ಲಿ ರೋಡ್-ಶೋ ನಡೆಸಿ, ಹಲವು ಉದ್ಯಮಿಗಳ ಜತೆ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಅವರು, ರಾಜ್ಯದ ಇಎಸ್ಡಿಎಂ, ವಿದ್ಯುತ್ ಚಾಲಿತ ವಾಹನ, ಫಾರ್ಮಸಿ, ಕೃಷಿಗೆ ಬೇಕಾಗುವ ಟ್ರ್ಯಾಕ್ಟರ್ ಮತ್ತಿತರ ಸಾಧನಗಳ ತಯಾರಿಕೆ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡುವಂತೆ ಅಶೋಕ್ ಲೇಲ್ಯಾಂಡ್, ರಾಣೆ ಗ್ರೂಪ್, ಟಾಫೆ, ಸನ್ಮಾರ್ ಗ್ರೂಪ್, ಟ್ಯೂಬ್ ಇನ್ವೆಸ್ಟ್ಮೆಂಟ್ಸ್, ಸ್ವೆಲೆಕ್ಟ್, ವಿಸ್ಟಾನ್, ಆಲ್ಫಾ, ಸಿರ್ಮಾ ಎಸ್ಜಿಎಸ್, ಸಾಲ್ಕಾಂಪ್, ಆ್ಯಂಫೆನಾಲ್, ನೋಕಿಯಾ, ಮುರುಗಪ್ಪ ಗ್ರೂಪ್, ಇಐಡಿ ಪ್ಯಾರಿ ಮುಂತಾದ ಪ್ರಮುಖ ಕಂಪನಿಗಳ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ವಾಣಿಜ್ಯ ಉದ್ದೇಶದ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ರಾಣೆ ಗ್ರೂಪ್, ಕರ್ನಾಟಕದಲ್ಲಿ ತಾನು 1,000 ಕೋಟಿ ರೂಪಾಯಿ ಹೂಡಲು ಆಸಕ್ತಿ ತಾಳಿರುವುದಾಗಿ ತಿಳಿಸಿ, 5-10 ಎಕರೆ ಜಮೀನು ಅಗತ್ಯವೆಂದು ಕೋರಿತು. ಸಚಿವರು, ಧಾರವಾಡವು ಇದಕ್ಕೆ ಸೂಕ್ತವಾಗಿದ್ದು, ಎಲ್ಲಾ ದೃಷ್ಟಿಗಳಿಂದಲೂ ಅನುಕೂಲಕರವಾಗಿದೆ ಎಂದು ವಿವರಿಸಿದರು. ಇದೇ ರೀತಿಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳಲ್ಲಿ ಹೂಡಿಕೆಗೆ ಹೆಸರಾಗಿರುವ ಸನ್ಮಾರ್ ಕಂಪನಿಗೆ ಆದಿನಾರಾಯಣ ಹೊಸಹಳ್ಳಿಯು ಸೂಕ್ತ ತಾಣವಾಗಿದೆ ಎಂದು ತಿಳಿಸಿತು.

ಈ ಸಂದರ್ಭದಲ್ಲಿ ಉದ್ಯಮಿಗಳು ಕೌಶಲ್ಯಾಭಿವೃದ್ಧಿ, ಕೈಗಾರಿಕಾ ಟೌನ್ ಶಿಪ್ ಗಳ ಅಭಿವೃದ್ಧಿ, ಇಸ್ಡಿಎಂ ಕಾರ್ಯ ಪರಿಸರ ಸೃಷ್ಟಿ, ತರಬೇತಿ ವ್ಯವಸ್ಥೆ, ನೀರಿನ ಬೆಲೆಯನ್ನು ಇಳಿಸಬೇಕಾದ ಜರೂರಿನ ಬಗ್ಗೆ ಸಚಿವರ ಗಮನ ಸೆಳೆದರು.

ಮೈಸೂರಿನ ಕೋಚನಹಳ್ಳಿಯಲ್ಲಿ ಇಎಸ್ಡಿಎಂ ಮತ್ತು ಬೆಂಗಳೂರಿನ ಸಮೀಪ ಫಾರ್ಮಾ ಕ್ಲಸ್ಟರ್ ಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸುತ್ತಿರುವ ಯೋಜನೆಯ ಬಗ್ಗೆ ವಿವರಿಸಿದರು. ಜತೆಗೆ ಹೂಡಿಕೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ರೂಪಿಸಿರುವ ನೀತಿಗಳು ಮತ್ತು ಕೊಡುತ್ತಿರುವ ಪ್ರೋತ್ಸಾಹಗಳನ್ನು ಮನದಟ್ಟು ಮಾಡಿಕೊಟ್ಟರು.

ಸಕ್ಕರೆ ಉತ್ಪಾದನೆ, ರಸಗೊಬ್ಬರ ಮತ್ತು ನ್ಯೂಟ್ರಾಸುಟಿಕಲ್ಸ್ ಉತ್ಪಾದನೆಗೆ ಹೆಸರಾಗಿರುವ ಇಐಡಿ ಪ್ಯಾರಿ ಕಂಪನಿಯು ಅಂತರರಾಜ್ಯ ಗಡಿಗಳಲ್ಲಿ ಮೊಲ್ಯಾಸಿಸ್ ಸಾಗಣೆಗೆ ಮುಕ್ತ ಅವಕಾಶ ಇರಬೇಕಾದ ಜರೂರನ್ನು ಸಚಿವರೊಂದಿಗೆ ಪ್ರಸ್ತಾಪಿಸಿತು. ಸಚಿವರು, ಈ ಸಮಸ್ಯೆಗಳನ್ನು ಕ್ಷಿಪ್ರವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಚಿವರ ಜತೆಗಿನ ಮಾತುಕತೆಗಳಲ್ಲಿ ಟಾಫೆ ಅಧ್ಯಕ್ಷೆ ಮಲ್ಲಿಕಾ ಶ್ರೀನಿವಾಸ್ ಮತ್ತು ನಿರ್ದೇಶಕಿ ಡಾ. ಲಕ್ಷ್ಮಿ ವೇಣು, ವೀಲ್ಸ್ ಇಂಡಿಯಾದ ಎಂಡಿ ಶ್ರೀವತ್ಸ್ ರಾಮ್, ಟ್ಯೂಬ್ ಇನ್ವೆಸ್ಟಮೆಂಟ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೆಳ್ಳಯನ್ ಸುಬ್ಬಯ್ಯ, ಅಂಶುಮಾನ್ ರವಿ ಮುಂತಾದವರು ಭಾಗವಹಿಸಿದ್ದರು.

ಸಚಿವರ ನೇತೃತ್ವದ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments