ಬೆಂಗಳೂರಿನ ಪೀಣ್ಯದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ತ್ರಿಬಲ್ ಮರ್ಡರ್ ಪ್ರಕರಣದ ವಿಚಾರಣೆ ವೇಳೆ ಟ್ವಿಸ್ಟ್ ಲಭಿಸಿದ್ದು, ಹೋಂಗಾರ್ಡ್ ನಿಂದ ಕೊಲೆಯಾಗಿದ್ದು ಪತ್ನಿಯಲ್ಲ. ಬದಲಾಗಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಮಹಿಳೆ ಎಂಬುದು ತಿಳಿದು ಬಂದಿದೆ.
ಮಚ್ಚಿನಿಂದ ಕೊಚ್ಚಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಪೊಲೀಸರಿಗೆ ಶರಣಾಗಿದ್ದ ಗಂಗಾರಾಜು ವಿಚಾರಣೆ ವೇಳೆ ಬೇರೆಯದ್ದೇ ಕಥೆ ಹೇಳಿದ್ದಾನೆ.
ಗಂಗರಾಜುಗೆ ಮದುವೆ ಆಗಿದ್ದು, ವಿಚ್ಛೇದನ ಪಡೆಯದೇ ಬೇರೆಯಾಗಿದ್ದ. ಮತ್ತೊಂದೆಡೆ ವಿಚ್ಚೇದನ ಪಡೆಯದೇ ಬೇರೆಯಾಗಿದ್ದ ಭಾಗ್ಯಮ್ಮ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇಬ್ಬರೂ ಪರಸ್ಪರ ಪರಿಚಯ ಆದ ನಂತರ 6 ವರ್ಷಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಭಾಗ್ಯಮ್ಮ ಸೇರಿ ಆಕೆಯ ಮಕ್ಕಳಿಗೂ ಅಕ್ರಮ ಸಂಬಂಧ ಇರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದ ಗಂಗರಾಜು ಮತ್ತೊಂದೆಡೆ ಭಾಗ್ಯಮ್ಮ ಕೂಡ ಮನೆಗೆ ಬಂದಿದ್ದ ಅಕ್ಕನ ಮಗಳು ಹೇಮಾವತಿ ಮೇಲೆ ಗಂಗರಾಜು ಕಣ್ಣು ಹಾಕಿದ್ದಾನೆ ಎಂಬ ಅನುಮಾನ ಮೂಡಿತ್ತು.
ಈ ವಿಷಯದಲ್ಲಿ ಇಬ್ಬರ ನಡುವೆ ಜಗಳ ಉಂಟಾಗಿದ್ದು, ಕೊಲೆಗೆ ಸಂಚು ರೂಪಿಸಿದ ಗಂಗರಾಜು ಹೆಸರಘಟ್ಟಕ್ಕೆ ಹೋಗಿ ಸಂತೆಯಲ್ಲಿ ಹೊಸ ಮಚ್ಚು ಖರೀದಿಸಿ ತಂದಿದ್ದ. ಭಾಗ್ಯಮ್ಮ ಮನೆಯಲ್ಲಿ ಇಲ್ಲದೇ ಇರುವ ಸಮಯ ನೋಡಿಕೊಂಡು ಗಲಾಟೆ ಶುರು ಮಾಡಿದ್ದು, ನವ್ಯಾ ಹಾಗೂ ಅಡ್ಡ ಬಂದ ಹೇಮಾವತಿ ಇಬ್ಬರ ತಲೆಗಳನ್ನು ಕತ್ತರಿಸಿ ರುಂಡ ಮುಂಡ ಬೇರ್ಪಡಿಸಿದ್ದಾನೆ.
ಹೊರಗೆ ಹೋಗಿದ್ದ ಭಾಗ್ಯಮ್ಮ ಬರುವುದನ್ನು ಬಾಗಿಲ ಹಿಂದೆ ನಿಂತು ಹೊಂಚು ಹಾಕುತ್ತಿದ್ದ. ಮನೆಗೆ ಮರಳಿದ ಭಾಗ್ಯಮ್ಮ ಇಬ್ಬರ ಭೀಕರ ಕೊಲೆ ನೋಡಿ ಕಿರುಚಾಡಿದ್ದಾಳೆ. ಅಷ್ಟರಲ್ಲಿ ಹಿಂದಿನಿಂದ ಬಂದ ಗಂಗರಾಜು ಆಕೆಯ ಮೇಲೂ ಕತ್ತಿ ಬೀಸಿ ಹತ್ಯೆಗೈದಿದ್ದಾನೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ವಿವರಿಸಿದ್ದಾರೆ.