ಸ್ಟಾರ್ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ರಣಜಿ ಟ್ರೋಫಿಗೆ ಪ್ರಕಟಿಸಲಾದ ದೆಹಲಿ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರನ್ ಕೊರತೆ ಎದುರಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿರುವ ಸ್ಟಾರ್ ಆಟಗಾರರಿಗೆ ದೇಶೀಯ ಟೂರ್ನಿಯಲ್ಲಿ ಆಡುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಆಟಗಾರರು ರಣಜಿಯಲ್ಲಿ ಆಡುವ ಸಾಧ್ಯತೆ ಇದೆ.
ರಣಜಿ ಟ್ರೋಫಿಗಾಗಿ ದೆಹಲಿ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ಆಯ್ಕೆದಾರರು ಕೊಹ್ಲಿ ಮತ್ತು ಪಂತ್ ಜೊತೆ ಚರ್ಚಿಸಿ ತಂಡದಲ್ಲಿ ಸ್ಥಾನ ನೀಡಿದ್ದಾರೆ ಎಂದು ಹೇಳಲಾಗಿದೆ.
ವಿರಾಟ್ ಕೊಹ್ಲಿ 2012ರಲ್ಲಿ ಕೊನೆಯ ಬಾರಿಗೆ ರಣಜಿಯಲ್ಲಿ ಆಡಿದ್ದರೆ, ರಿಷಭ್ ಪಂತ್ 2017ರ ನಂತರ ಆಡಿಲ್ಲ. ಕಳೆದ ವರ್ಷವೂ ಕೊಹ್ಲಿ ಮತ್ತು ಪಂತ್ ದೆಹಲಿ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮ ತಂಡದಲ್ಲಿ ಆಡಿರಲಿಲ್ಲ.
ಇತ್ತೀಚೆಗಿನ ಟೆಸ್ಟ್ ಸರಣಿಗಳಲ್ಲಿ ಕೊಹ್ಲಿ, ರೋಹಿತ್ ಶರ್ಮ, ರಿಷಭ್ ಪಂತ್ ಮುಂತಾದ ಸ್ಟಾರ್ ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶೀಯ ಟೂರ್ನಿಯಲ್ಲಿ ಆಡುವಂತೆ ಒತ್ತಡಗಳು ಕೇಳಿ ಬಂದಿದ್ದವು.
2020ರ ನಂತರ ಕೊಹ್ಲಿ ರನ್ ಸರಾಸರಿಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಕಳೆದ 39 ಟೆಸ್ಟ್ ಗಳ ಪೈಕಿ 69 ಇನಿಂಗ್ಸ್ ನಲ್ಲಿ 30.72ರ ಸರಾಸರಿಯಲ್ಲಿ 2078 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 9 ಅರ್ಧಶತಕ ಸೇರಿವೆ. ಇದಕ್ಕೂ ಮುನ್ನ ಅಂದರೆ ಕೊಹ್ಲಿ ಸರಾಸರಿ 54.97 ಆಗಿತ್ತು. ಇದೀಗ ಒಟ್ಟಾರೆ ಸರಾಸರಿ 46.85ಕ್ಕೆ ಕುಸಿದಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬ್ಯಾಟ್ಸ್ ಮನ್ ಗಳ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕೋಚ್ ಗೌತಮ್ ಗಂಭೀರ್ ಎಲ್ಲಾ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡುವಂತೆ ಸೂಚಿಸಿದ್ದರು.