ಮಹಿಳೆಯೊಬ್ಬರು ಹೋಟೆಲ್ ನಲ್ಲಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಗಾಯಕನ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬದೋಲಿ ಹಾಗೂ ಗಾಯಕನ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
2024 ಡಿಸೆಂಬರ್ 13ರಂದು ಸೋಲಾನ್ ಜಿಲ್ಲೆಯ ಕಸೌಲಿ ಎಂಬಲ್ಲಿ ಹೋಟೆಲ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಇದನ್ನು ವೀಡಿಯೋ ಮಾಡಿ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೋಹನ್ ಲಾಲ್ ಬದೋಲಿ ಹಾಗೂ ಗಾಯಕ ಜೈ ಭಗವಾನ್ ಅಲಿಯಾಸ್ ರಾಕಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಎಫ್ ಐಆರ್ ದಾಖಲೆ ಹರಿದಾಡುತ್ತಿದೆ.
2023 ಜುಲೈ 13ರಂದು ತನ್ನ ಗೆಳೆಯ ಹಾಗೂ ಬಾಸ್ ಆಗಿರುವ ವ್ಯಕ್ತಿ ಜೊತೆ ಮಹಿಳೆ ಹೋಟೆಲ್ ನಲ್ಲಿ ತಂಗಿದ್ದರು. ಅದೇ ಹೋಟೆಲ್ ನಲ್ಲಿ ತಂಗಿದ್ದ ಮೋಹನ್ ಲಾಲ್ ಬದೋಲಿ ಮತ್ತು ರಾಕಿ ಪರಿಚಯ ಆಗಿದ್ದು, ಮೋಹನ್ ಲಾಲ್ ತಾನು ರಾಜಕೀಯ ವ್ಯಕ್ತಿಯಾಗಿದ್ದು, ಸರ್ಕಾರಿ ಉದ್ಯೋಗ ಮುಂತಾದ ನೆರವು ಮಾಡಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೇ ಗಾಯಕ ರಾಕಿ ಅವಕಾಶ ನೀಡುವುದಾಗಿ ಹೇಳಿದ್ದರು.
ನಂತರ ಆತಿಥ್ಯದ ನೆಪದಲ್ಲಿ ಮದ್ಯ ಸೇವಿಸಲು ಒತ್ತಾಯಿಸಿದರು. ಒಪ್ಪದೇ ಇದ್ದಾಗ ಇಬ್ಬರೂ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅತ್ಯಾಚಾರದ ವೀಡಿಯೋ ಮತ್ತು ಫೋಟೊ ತೆಗೆದು ನನಗೆ ಬೆದರಿಕೆ ಹಾಕಿದರು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.